ಕಾರವಾರ: ಜಿಲ್ಲಾ ಕೇಂದ್ರ ಕಾರವಾರ ನಗರದ ಹಳೆಯ ಕಟ್ಟಡ ಗಾಂಧಿ ಮಾರ್ಕೆಟ್‌ನ್ನು ಈಗಿರುವ ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಿ ನಗರದ ಸೌಂದರ್ಯ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಲು ನಗರಸಭೆ ಮತ್ತು ನಗರಾಡಳಿತ ಸಚಿವಾಲಯ ಉದ್ದೇಶಿಸಿದೆ.
ಹಳೆಯ ಮಾರ್ಕೆಟನಲ್ಲಿರುವ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಶಾಸಕಿ ರೂಪಾಲಿ ನಾಯ್ಕ ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಜೊತೆ ಚರ್ಚಿಸಿ, ಪತ್ರ ವ್ಯವಹಾರ ಮಾಡಿ 9 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. 1931ರಲ್ಲಿ ಗಾಂಧಿಜೀ ಕಾರವಾರಕ್ಕೆ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಕಾರ್ಯಕ್ರಮಕ್ಕೆ ಬಂದ ನೆನಪಿಗಾಗಿ ನಗರಸಭೆ ಗಾಂ ಧಿ ಮಾರ್ಕೆಟ್ ನಿರ್ಮಿಸಿತ್ತು. ಶತಮಾನದ ಹಿಂದಿನ ಗಾಂಧಿ ಮಾರುಕಟ್ಟೆ ಮಳಿಗೆಗಳು ಶಿಥಿಲಗೊಂಡಿವೆ. ನಗರದ ಹೃದಯಭಾಗದಲ್ಲಿರುವ ಈ ಮಾರುಕಟ್ಟೆ ವ್ಯಾಪಾರ ವಹಿವಾಟಿಗೆ ಸೂಕ್ತವಾಗಿದೆ.
ಆದರೆ ಕಟ್ಟಡ ಹಳೆಯದಾಗಿದ್ದು, ಹೊಸ ಕಟ್ಟಡ ಕಟ್ಟಲು ಕಳೆದ ಹತ್ತು ವರ್ಷಗಳಿಂದ ನಗರಸಭೆ ಪ್ರಯತ್ನಿಸಿತ್ತು. ಆದರೆ ಬಾಡಿಗೆ ಇರುವವರ ಮನವೊಲಿಸುವುದೇ ನಗರಸಭೆಗೆ ದೊಡ್ಡ ತಲೆನೋವಾಗಿತ್ತು. ಈಗ ಇರುವ ಸ್ಥಳದಲ್ಲಿಯೇ ವ್ಯಾಪಾರ ಮಳಿಗೆ ಮಾಡಿ ಗ್ರಾಹಕ ಸ್ನೇಹಿಯಾಗಿ ಆಧುನಿಕ ಸೌಲಭ್ಯಗಳೊಂದಿಗೆ 9 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಶಾಸಕರು ಬಯಸಿದ್ದರು. ಈಗ ಹೊಸ ಕಟ್ಟಡ ನಿರ್ಮಾಣಕ್ಕೆ ನಗರೋತ್ಥಾನದಡಿ 5 ಕೋಟಿ ರೂ. ಹಾಗೂ ಶಾಸಕರ ವಿಶೇಷ ಅನುದಾನವಾಗಿ 4 ಕೋಟಿ ರೂ.ಗಳನ್ನು ವಾಣಿಜ್ಯ ಸಂಕೀರ್ಣಕ್ಕೆ ಮೀಸಲಿಡಲಾಗಿದೆ.
ಹೆಚ್ಚುವರಿ ಅನುದಾನ ಬೇಕಿದ್ದಲ್ಲಿ ಅನುದಾನ ತರುವ ಭರವಸೆಯನ್ನು ಶಾಸಕರು ನೀಡಿದ್ದಾರೆ. ಈಗಾಗಲೆ ಹಳೆಯ ಕಟ್ಟಡದಲ್ಲಿ ಇರುವ ವ್ಯಾಪಾರಸ್ಥರಿಗೆ ಹೊಸ ಕಟ್ಟಡದಲ್ಲಿ ಅನುಕೂಲವಾಗುವಂತೆ ನೆಲ ಮಹಡಿ ಮಳಿಗೆಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಶಾಸಕಿ ಸಭೆ ನಡೆಸಿ ಅಂಗಡಿಕಾರರಿಗೆ ಮಾಹಿತಿ ನೀಡಿದ್ದಾರೆ. ನಗರಸಭೆ, ಸಂಬಂಧಪಟ್ಟ ಇಲಾಖೆಗಳ ಸಹಕಾರದಲ್ಲಿ ನಗರದ ಹೃದಯಭಾಗದಲ್ಲಿ ಸುಸಜ್ಜಿತ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸುವ ಮೂಲಕ ಅಂಗಡಿಕಾರರು, ಗ್ರಾಹಕರು ಎಲ್ಲರಿಗೂ ಅನುಕೂಲ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನಗರದ ಸೌಂದರ್ಯವೂ ಇದರಿಂದ ಇಮ್ಮಡಿಯಾಗಲಿದೆ. ಮಳೆಗಾಲದ ನಂತರ ಹಳೆಯ ಕಟ್ಟಡ ಕೆಡವಲು ನಿರ್ಧರಿಸಲಾಗಿದೆ.
2022 ಸೆಪ್ಟೆಂಬರ್ ಒಳಗಡೆ ಅಂಗಡಿಗಳನ್ನು ತೆರವುಗೊಳಿಸಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವುದು ಈಗ ಯೋಜಿತವಾಗಿದೆ.
ಗಾಂಧಿ ಮಾರುಕಟ್ಟೆ ಅಂಗಡಿ ಮಳಿಗೆಗಳು ಶತಮಾನದ ಹಿಂದೆ ನಿರ್ಮಾಣವಾಗಿದ್ದು, ಈಗ ಶಿಥಿಲವಾಗಿವೆ. ಈಗ ಇರುವ ಅಂಗಡಿಕಾರರಿಗೆ ನೂತನ ವಾಣಿಜ್ಯ ಸಂಕೀರ್ಣದಲ್ಲಿ ಆದ್ಯತೆ ಮೇಲೆ ಮಳಿಗೆಗಳನ್ನು ನೀಡಲಾಗುವುದು. ಎಲ್ಲರ ಸಹಕಾರದಿಂದ ನಗರದ ಮುಖ್ಯ ಪ್ರದೇಶದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ.
ರೂಪಾಲಿ ನಾಯ್ಕ, ಶಾಸಕಿ.