ಹುಬ್ಬಳ್ಳಿ: ಬೆಣ್ಣೆ ಹಳ್ಳದ ಪ್ರವಾಹ ತಡೆ ನಿಟ್ಟಿನ ಯೋಜನೆಗೆ ನೀರಾವರಿ ಮಂಡಳಿ ಒಪ್ಪಿಗೆ ನೀಡಿದೆ. ಇದನ್ನು ಸಂಪುಟ ಸಭೆಗೆ ತರುವಂತೆ ಈಗಾಗಲೇ ಮುಖ್ಯಮಂತ್ರಿಯವರಿಗೆ ತಿಳಿಸಿದ್ದು, ಮತ್ತೂಮ್ಮೆ ಅವರ ಗಮನಕ್ಕೆ ತರಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಇಂಗಳಹಳ್ಳಿಯಲ್ಲಿ ಬೆಣ್ಣೆ ಹಳ್ಳ ಪ್ರವಾಹಕ್ಕೆ ಯುವಕನೊಬ್ಬ ಕೊಚ್ಚಿ ಹೋಗಿದ್ದು, ಸುಮಾರು 29 ಜನರನ್ನು ರಕ್ಷಣೆ ಮಾಡಿದ್ದರ ಹಿನ್ನೆಲೆಯಲ್ಲಿ ಮಂಗಳವಾರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರೊಂದಿಗೆ ಗ್ರಾಮಕ್ಕೆ ತೆರಳಿ ಪರಿಶೀಲಿಸಿದ ನಂತರ ಅಣ್ಣಿಗೇರಿ ತಾಲೂಕಿನ ಭದ್ರಾಪುರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಾಗಲೇ ಅಂದಾಜು 350 ಕೋಟಿ ರೂ. ವೆಚ್ಚದಲ್ಲಿ ತುಪ್ಪರಿಹಳ್ಳದ ಅಗಲೀಕರಣ ಹಾಗೂ ಸ್ವತ್ಛತಾ ಕಾರ್ಯಕ್ಕೆ ಕ್ರಿಯಾಯೋಜನೆ ಆಗಿದೆ. ಅದೇ ರೀತಿ ಬೆಣ್ಣೆಹಳ್ಳದ ಅಗಲೀಕರಣ, ಸ್ವತ್ಛತೆ ನಿಟ್ಟಿನಲ್ಲಿ ಸಂಪುಟ ಸಭೆಯಲ್ಲಿ ವಿಷಯ ತಂದು ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಈಗಾಗಲೇ ನಾನು, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅಮೃತ ದೇಸಾಯಿ ಮನವಿ ಮಾಡಿದ್ದು, ಒಂದೆರಡು ದಿನಗಳಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿಯವರ ಗಮನಕ್ಕೆ ಇದನ್ನು ತರುವುದಾಗಿ ತಿಳಿಸಿದರು.
ಬೆಣ್ಣೆಹಳ್ಳ ಪ್ರವಾಹ ತಡೆ ನಿಟ್ಟಿನಲ್ಲಿ ಈಗಾಗಲೇ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಸೇತುವೆಗಳ ಎತ್ತರ ಹೆಚ್ಚಳ, ಕೆಲವೊಂದು ಕಡೆ ಅಗಲೀಕರಣ, ಹೂಳು ತೆಗೆಯುವುದು ಇನ್ನಿತರ ಕಾರ್ಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಳ್ಳದ ಅಗಲೀಕರಣ ಸೇರಿದಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳ ಲಾಗುವುದು. ಬೆಣ್ಣೆಹಳ್ಳ ಪಾತ್ರದ ಅತಿಕ್ರಮಣವೇ ಪ್ರವಾಹ ಸ್ಥಿತಿಗೆ ಕಾರಣವಾಗುತ್ತಿದೆ. ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಗೆ ಪ್ರಧಾನಮಂತ್ರಿ ಬೆಳೆವಿಮೆ ಯೋಜನೆಯಡಿ ಪರಿಹಾರ ದೊರೆಯ ಲಿದ್ದು, ಇದಲ್ಲದೆ ಎನ್‌ಡಿಆರ್‌ಎಫ್‌ನಿಂದ ಪರಿಹಾರ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಡಿಸಿಗೆ ಸೂಚಿಸಲಾಗಿದೆ. ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ಒದಗಿಸಲು ಯತ್ನ ನಡೆಯುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೆಸರು-ಉದ್ದು ಬೆಳೆಗಳ ಖರೀದಿ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಕಳೆದ ವರ್ಷ ಬೆಂಬಲ ಬೆಲೆಯಡಿ ಖರೀದಿ ಕೇಂದ್ರದಲ್ಲಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಲ್‌ವರೆಗೆ ಹೆಸರು ಖರೀದಿ ಮಾಡಲಾಗಿತ್ತು. ಈ ವರ್ಷ ಅದನ್ನು 15 ಕ್ವಿಂಟಲ್‌ಗೆ ಹೆಚ್ಚಿಸಲಾಗಿದೆ ಎಂದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಡಿಸಿ ಗುರುದತ್ತ ಹೆಗಡೆ ಇನ್ನಿತರರಿದ್ದರು.
ಪತ್ತೆಯಾಗದ ಆನಂದ
ಇಂಗಳಹಳ್ಳಿ ಬಳಿ ಸೋಮವಾರ ಬೆಣ್ಣೆಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಆನಂದ ಹಿರೇಗೌಡರ ಶೋಧ ಕಾರ್ಯ ಮುಂದುವರಿದಿದೆ. ಹುಡುಕಾಟ ನಡೆಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳವಾರ ಸಹ ಕಾರ್ಯಾಚರಣೆ ಮುಂದುವರಿಸಿ ಹುಡುಕಾಟ ನಡೆಸಿದರೂ ಪತ್ತೆ ಆಗಿಲ್ಲ. ಕಾರ್ಯಾಚರಣೆ ಬುಧವಾರಕ್ಕೆ ಮುಂದೂಡಲಾಗಿದೆ. ಎರಡು ಬೋಟ್ ಹಾಗೂ ಇನ್ನಿತರ ಸಲಕರಣೆಗಳೊಂದಿಗೆ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಸೇರಿದಂತೆ ಹಲವು ಸಿಬ್ಬಂದಿ ಇದ್ದರು.