Advertisement

ಕಾಂಪ್ಲೆಕ್ಸ್‌ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್‌

08:44 PM Nov 23, 2021 | Team Udayavani |

ಬೆಂಗಳೂರು:ರಾಜ್ಯದಲ್ಲಿ ಈ ಬಾರಿಯೂ ಸಹ ಬಿತ್ತನೆ ಹೆಚ್ಚಾಗಿದ್ದು, ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಬಳಕೆ ಮಾಡದೆ ಮೂಲಗೊಬ್ಬರವಾದ ಕಾಂಪೆಕ್ಸ್‌ ಗೊಬ್ಬರ ಬಳಕೆಯತ್ತವೂ ರೈತರು ಹೆಚ್ಚಿನ ಗಮನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

Advertisement

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಾ.ಮನ್ಸುಖ್‌ ಮಾಂಡವಿಯಾ ಅವರೊಂದಿಗೆ ನಡೆದ ರಸಗೊಬ್ಬರ ಸರಬರಾಜು ಸಂಬಂಧ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿಎಪಿ ಬದಲಾಗಿ ಕಾಂಪ್ಲೆಕ್ಸ್‌ ರಸಗೊಬ್ಬರ ಬಳಕೆಗೆ ಈಗಾಗಲೇ ಎಲ್ಲಾ ರೈತಸಂಪರ್ಕ ಕೇಂದ್ರಗಳು ಹಾಗೂ ಮಾರಾಟಗಾರರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಡಿಎಪಿ ಬದಲಿಗೆ ಕಾಂಪೆಕ್ಸ್‌ ರಸಗೊಬ್ಬರಗಳನ್ನು ರೈತರು ಬಳಸಲು ಪ್ರಚಾರ ಕೈಗೊಂಡಿರುವ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.ಅಲ್ಲದೇ ರಾಜ್ಯಕ್ಕೆ ಕೇಂದ್ರದಿಂದ ಹಂಚಿಕೆಯಾದ 5 ಲಕ್ಷ ಬಾಟಲ್‌ ನ್ಯಾನೋ ಯೂರಿಯಾದಲ್ಲಿ ಈಗಾಗಲೇ 3 ಲಕ್ಷ ಬಾಟಲ್‌ ನ್ಯಾನೋ ಯೂರಿಯಾ ಬಳಕೆಯಾಗಿದ್ದು, ಅಂದಾಜು 16 ಸಾವಿರ ಮೆ.ಟನ್‌ ರಸಗೊಬ್ಬರ ಈ ನ್ಯಾನೋ ಯೂರಿಯಾ ಬಳಕೆಯಿಂದ ಉಳಿತಾಯವಾಗಿದೆ ಎಂಬುದನ್ನು ವಿವರಿಸಿದರು.

ಇದನ್ನೂ ಓದಿ:ಕ್ಲಬ್ , ರೆಸಾರ್ಟ್‌ ಮೇಲೆ ಪೊಲೀಸರ ದಾಳಿ : 113 ಜನರ ಬಂಧನ, 5.83 ಲಕ್ಷ ರೂ ಜಪ್ತಿ

ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ ರೈತರಿಗೆ ಕೊರತೆಯಾಗದಂತೆ ಈ ಹಿಂದಿನಿಂದಲೂ ಸಮರ್ಪಕವಾದ ರೀತಿಯಲ್ಲಿ ರಸಗೊಬ್ಬರವನ್ನು ಪೂರೈಸುತ್ತಿದ್ದು, ಈ ಬಾರಿಯೂ ಬಿತ್ತನೆ ಹೆಚ್ಚಾಗಿರುವುದರಿಂದ ರಸಗೊಬ್ಬರಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ರೈತರ ಬೇಡಿಕೆಯನುಸಾರ ಕೇಂದ್ರಕ್ಕೆ ರಸಗೊಬ್ಬರ ಪೂರೈಸುವಂತೆ ಮನವಿ ಮಾಡಲಾಗುತ್ತಿದೆ.ಬೀಳು ಭೂಮಿಯಲ್ಲಿಯೂ ಸಹ ಬೆಳೆ ತೆಗೆಯುವ ಭರವಸೆ ರೈತ ಸಮುದಾಯದಲ್ಲಿ ಪ್ರಸಕ್ತ ಮಳೆ ಮೂಡಿಸಿದ್ದು, ಮಳೆಯಾಶ್ರಿತ ಬೆಳೆಗಳಿಗೆ ಪ್ರಮುಖ ರಸಗೊಬ್ಬರ ಮೂಲಗಳಾದ ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳ ಬೇಡಿಕೆಯನ್ನು ಹೆಚ್ಚಿಸಿದೆ ಎಂದು ಹೇಳಿದರು.

Advertisement

ರಸಗೊಬ್ಬರ ಬೇಡಿಕೆಯನುಸಾರ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಪೂರೈಸುತ್ತಿದೆ. ಕರ್ನಾಟಕದಲ್ಲಿ ಮುಂಗಾರು ಹಂಗಾಮಿನಲ್ಲಿ ಗುರಿಗಿಂತ ಹೆಚ್ಚಿನ ಅಂದರೆ 78.51 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದ್ದು, ಮುಂಗಾರುಹಂಗಾಮಿನಲ್ಲಿ ಬೇಡಿಕೆಯಿದ್ದ ವಿವಿಧ ರಸಗೊಬ್ಬರ ಬೇಡಿಕೆಯನ್ನು ತೃಪ್ತಿದಾಯಕವಾಗಿ ಈಡೇರಿಸಿರುವುದಕ್ಕೆ ಸಚಿವರು ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next