ಶಹಾಪುರ: ಒಂದು ವರ್ಷದಲ್ಲಿ ಇಂಧನ ಇಲಾಖೆಯಲ್ಲಿ ಹಲವಾರು ಸುಧಾರಣೆ ಮಾಡಲಾಗಿದೆ. ಈ ಮೊದಲು ವಿದ್ಯುತ್ ಪರಿವರ್ತಕ ಸುಟ್ಟರೆ ಅದನ್ನು ಬದಲಾಯಿಸಲು 8ರಿಂದ 10 ದಿನಗಳ ಕಾಲ ಸಮಯ ಬೇಕಾಗುತ್ತಿತ್ತು. ಆದರೆ ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಒಂದು ವರ್ಷದೊಳಗೆ 24 ಗಂಟೆಯಲ್ಲಿ ವಿದ್ಯುತ್ ಪರಿವರ್ತಕ ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ತಾಲೂಕಿನ ಕೊಳ್ಳೂರು ಎಂ. ಗ್ರಾಮದಲ್ಲಿ 668.84 ಲಕ್ಷ ವೆಚ್ಚದಲ್ಲಿ 110/ 11 ಕೆವಿ ವಿದ್ಯುತ್ ಉಪ ಕೇಂದ್ರ ಲೋಕಾರ್ಪಣೆ ಮಾಡಿ ಮಾತನಾಡಿದರು.
ಈಗಾಗಲೇ 88 ಸಾವಿರ ಸುಟ್ಟ ವಿದ್ಯುತ್ ಪರಿವರ್ತಕಗಳನ್ನು 24 ಗಂಟೆಯೊಳಗಾಗಿ ಬದಲಾಯಿಸಲಾಗಿದೆ. 33 ಕಡೆ ಟಿಸಿ ಬ್ಯಾಂಕ್ ಸ್ಥಾಪನೆ ಮಾಡಲಾಗಿದ್ದು, ಸುಮಾರು 40 ಕಡೆ ಟಿಸಿ ರಿಪೇರಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ವಿದ್ಯುತ್ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಶೇ. 100ರಷ್ಟು ನಿವಾರಣೆಗೆ ಸರ್ಕಾರ ಕಂಕಣ ಬದ್ಧವಾಗಿದೆ. ಅದಕ್ಕೆ ತಕ್ಕಂತೆ ವಿದ್ಯುತ್ ಸಮಸ್ಯೆ ಇರುವೆಡೆ ಉಪ ಕೇಂದ್ರ ಸ್ಥಾಪನೆ ಮಾಡುವ ಮೂಲಕ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿದಂತಾಗಿದೆ. ಸರ್ಕಾರ ನುಡಿದಂತೆ ನಡೆದಿದೆ. ಗ್ರಾಪಂ ವ್ಯಾಪ್ತಿಯ ಮನೆಗಳಿಗೆ “ಬೆಳಕು ಯೋಜನೆ’ ವಿದ್ಯುತ್ ಸೌಲಭ್ಯ ಪಡೆಯಲು ಸ್ಥಳೀಯ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ, ಜೆಸ್ಕಾಂ ಎಂಡಿ ರಾಹುಲ್, ಫಿಡಲ್ ಅಧ್ಯಕ್ಷ ಚಂದು ಪಾಟೀಲ್, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಕೊಲ್ಲೂರು ಗ್ರಾಪಂ ಅಧ್ಯಕ್ಷೆ ಚಂದಮ್ಮ ಕವಳಿ, ಉಪಾಧ್ಯಕ್ಷೆ ನಾಗಮ್ಮ ಯಾದಗಿರಿ, ಸುಭಾಷ್ ಎಸ್. ಬೋಸ್ಲೆ, ಚಂದ್ರಕಾಂತ್ ಪಾಟೀಲ್, ರಾಜೇಶ್ ಹಿಪ್ಪರಗಿ, ಅನಿಲ್ ಕುಮಾರ್ ಒಂಟೆ, ಅಭಿಯಂತರ ರಾಘವೇಂದ್ರ, ಬಸಂತ್ ಕುಮಾರ್, ದಯಾನಂದ್, ಮರೆಪ್ಪ ಕಡೆಕರ್ ಸೇರಿದಂತೆ ಇತರರಿದ್ದರು. ಮಲ್ಲಯ್ಯಸ್ವಾಮಿ ಹಿರೇಮಠ ಮತ್ತು ಅವರ ಕಲಾತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.