ಬೆಂಗಳೂರು: “ಪ್ರತಿಶತ ಮತದಾನ ಇದುವೇ ನಮ್ಮಯ ವಾಗ್ಧಾನ’ ಎಂದು ಹೇಳುತ್ತಿರುವ ಚುನಾವಣಾ ಆಯೋಗ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಬೇಕಾಗುವ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ.
ಈ ಬಾರಿಯ ಚುನಾವಣೆಯನ್ನು “ಗರಿಷ್ಠ ಮತದಾರ ಸ್ನೇಹಿ’ಯನ್ನಾಗಿ ಮಾಡಲು ಪಣ ತೊಟ್ಟಿರುವ ಆಯೋಗ ಮತದಾರರೇ ಪ್ರಜಾಪ್ರಭುತ್ವ ಗೆಲ್ಲಿಸುವ “ಸೈನಿಕರು’ ಎಂದು ಹೇಳುತ್ತಿದೆ. ಅದಕ್ಕಾಗಿ ಮತದಾನದ ದಿನ ಮತದಾರರಿಗೆ ಯಾವುದೇ ಗೊಂದಲ,
ಅನುಮಾನಗಳು ಇರಬಾರದು ಅನ್ನುವ ಕಾರಣಕ್ಕೆ “ಓಟರ್ ಗೈಡ್’, “ಫೋಟೋ ಓಟರ್ ಸ್ಲಿಪ್’ಗಳನ್ನು ತಾನೇ ಹಂಚುತ್ತಿರುವ ಆಯೋಗ ಇದೀಗ, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇವಿಎಂ ಮತ್ತು ಬ್ಯಾಲೆಟ್ ಪೇಪರ್ ಗಳ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಅಳವಡಿಸುತ್ತಿದೆ.
ಮತದಾರರು ತಾವು ಮತ ಹಾಕಬೇಕಾದ ಅಭ್ಯರ್ಥಿಯನ್ನು ಗುರುತಿಸಲು ಸುಲಭವಾಗಲು ಆಯೋಗ ಈ ಕ್ರಮ ಕೈಗೊಳ್ಳುತ್ತಿದೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಹೆಸರಿನ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇದ್ದಾಗ, ಸಹಜವಾಗಿ ಮತದಾರರಲ್ಲಿ ಗೊಂದಲ ಮೂಡುತ್ತದೆ. ಈ ಗೊಂದಲ ನಿವಾರಣೆಗೆ ಇವಿಎಂಗಳ ಬ್ಯಾಲೆಟ್ ಯೂನಿಟ್‌ಗಳ ಮೇಲೆ ಮತ್ತು ಪೋಸ್ಟಲ್ ಬ್ಯಾಲೆಟ್ ಪೇಪರ್‌ಗಳ ಮೇಲೆ ಅಭ್ಯರ್ಥಿಗಳ ಫೋಟೋ ಪ್ರಿಂಟ್ ಮಾಡಿಸುತ್ತಿದೆ.
ಇದಕ್ಕಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳಿಗೆ ತಮ್ಮ ಫೋಟೋಗಳನ್ನು ನೀಡಬೇಕು. μÅಂಟ್ ಆಗುವ ಫೋಟೋ ಗಾತ್ರ ಎಷ್ಟಿರಬೇಕು, ಗುಣಮಟ್ಟ ಹೇಗಿರಬೇಕು ಅನ್ನುವುದನ್ನು ಆಯೋಗ ನಿರ್ಧರಿಸುತ್ತದೆ. ಒಟ್ಟಾರೆ ಆ ಫೋಟೋ ನೋಡಿದ ತಕ್ಷಣ ಮತದಾರನಿಗೆ ತನ್ನ ಆಯ್ಕೆಯ ಅಭ್ಯರ್ಥಿಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಬೇಕು. ಈ ಬಗ್ಗೆ ಅಗತ್ಯ ಜಾಗೃತಿ ಮೂಡಿಸುವಂತೆ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚನೆ ಸಹ ನೀಡಿದೆ.