ಬೆಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯದ ಏಳು ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಕೈಗೊಂಡಿರುವ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಜೂ.10 ರಿಂದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಮಾರ್ಟ್ ಸಿಟಿಯಡಿ ರಾಜ್ಯದಲ್ಲಿ 6448 ಕೋಟಿ ರೂ. ಮೊತ್ತದ ಯೋಜನೆಗಳನ್ನು ರೂಪಿಸಿದ್ದು ಆ ಪೈಕಿ 2500 ಕೋಟಿ ರೂ. ಮೊತ್ತದ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. 2500 ಕೋಟಿ ರೂ. ಮೊತ್ತದ ಯೋಜನೆಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಒಂದು ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ ಎಂದು ಹೇಳಿದರು.
ಒಟ್ಟಾರೆ 4411.9 ಕೋಟಿ ರೂ. ಮೊತ್ತದ ಯೋಜನೆ ಅನುಷ್ಠಾನ, ಪ್ರಗತಿ, ಟೆಂಡರ್ ಹಂತದಲ್ಲಿದ್ದು 20136.65 ಕೋಟಿ ರೂ. ಮೊತ್ತದ ಯೋಜನೆಗಳು ಕ್ರಿಯಾ ಯೋಜನೆ, ಅನುಮೋದನೆ ಹಂತದಲ್ಲಿವೆ. ನಾನು ಸಚಿವನಾಗುವ ಮೊದಲು ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಡಿ ಕರ್ನಾಟಕವು 11ನೇ ರ್‍ಯಾಂಕಿಂಗ್‌ನಲ್ಲಿದ್ದು ಇದೀಗ 6 ನೇ ಸ್ಥಾನಕ್ಕೆ ಬಂದಿದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಕೆಲವೆಡೆ ಎದುರಾಗಿದ್ದ ಅಡ್ಡಿಗಳನ್ನು ನಿವಾರಿಸಲಾಗಿದೆ. ಕೇಂದ್ರ ಸರ್ಕಾರವು ಸಹ ರಾಜ್ಯ ಸರ್ಕಾರದ ಮನವಿ ಮೇರೆಗೆ ನಿಯಮಾವಳಿಯಲ್ಲಿ ಸ್ವಲ್ಪ ಮಟ್ಟಿಗೆ ಸರಳೀಕರಣ ಮಾಡಿ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನೀತಿ ಸಂಹಿತೆ ಯೋಜನೆಯ ಅನುಷ್ಟಾನದಲ್ಲಿ ವಿಳಂಬವಾಗಲು ಕಾರಣ. ಇನ್ನು, ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಯೋಜನೆಗಳ ಅನುಷ್ಟಾನಕ್ಕೆ ಕೆಲವೆಡೆ ಸಮಸ್ಯೆಯುಂಟಾಗಿದೆ. ಉದಾಹರಣೆಗೆ ದಾವಣಗೆರೆಯಲ್ಲಿ ಮಂಡಕ್ಕಿ ಭಟ್ಟಿ ಗ್ಯಾಸ್ ಆಧಾರಿತ ಆಗಿ ಪರಿವರ್ತನೆ ಮಾಡಲು ಅಲ್ಲಿನವರು ಒಪ್ಪುತ್ತಿಲ್ಲ.
ಆದರೆ, ಪ್ರಸ್ತುತ ಟೈರ್ ಸೇರಿ ಕೆಲವು ವಸ್ತು ಹಾಕಿ ಸುಡುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ನಿಯಮಾವಳಿಗಳ ಪ್ರಕಾರ ಅದಕ್ಕೆ ಅವಕಾಶವಿಲ್ಲ. ಹೀಗಾಗಿ, ಮಂಡಕ್ಕಿ ಭಟ್ಟಿ ನಿರ್ವಹಣೆ ಮಾಡುವವರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಮನೆ ನಿರ್ಮಿಸಲು ಹಾಗೂ ಬಡಾವಣೆ ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆಗೆ ಜೂ.11 ರಂದು ಚಾಲನೆ ನೀಡಲಾಗುವುದು. 1200 ಚದರಡಿವರೆಗೆ ಮನೆ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರದ ಅಗತ್ಯ ಇರುವುದಿಲ್ಲ. ಸ್ವಯಂ ಘೋಷಣೆ ಪ್ರಮಾಣಪತ್ರ ಸಾಕು. 15 ದಿನಗಳಲ್ಲಿ ಆನ್‌ಲೈನ್ ಮೂಲಕವೇ ಮಂಜೂರಾತಿ ನೀಡುವುದು ಕಡ್ಡಾಯ. ಇದು ಎಲ್ಲ ಮಹಾನಗರ ಪಾಲಿಕೆ ಸೇರಿ ರಾಜ್ಯಾದ್ಯಂತ ಅನ್ವಯವಾಗಲಿದೆ. ಕಾನೂನು ಪ್ರಕಾರ ಅಗತ್ಯ ಇರುವ ದಾಖಲಾತಿ ಸಲ್ಲಿಸಿದರೆ ಸಾಕು.
-ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ