ಮೂಡಿಗೆರೆ: ಅತಿವೃಷ್ಟಿಯಿಂದ ಮನೆ ಮತ್ತು ಭೂಮಿ ಕಳೆದುಕೊಂಡ ಮಲೆಮನೆ ಮತ್ತು ಮದುಗುಂಡಿ ಭಾಗದ ನಿರಾಶ್ರಿತರಿಗೆ ಭೂಮಿ ಮಂಜೂರು ಮಾಡುವ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಹಾಗೂ ನಿರಾಶ್ರಿತರ ಸಭೆ ನಡೆಸಲಾಯಿತು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಮನೆ, ಭೂಮಿ ಕಳೆದುಕೊಂಡ ನಿರಾಶ್ರಿತರಿಗೆ ಈಗಾಗಲೇ ಬೈದುವಳ್ಳಿ ಸರ್ವೆ ನಂ. 142ರಲ್ಲಿ 20 ಎಕರೆ ಭೂಮಿ ಗುರುತು ಮಾಡಲಾಗಿದೆ. ಅಲ್ಲದೆ ಜಿ.ಹೊಸಳ್ಳಿ ಸರ್ವೇ ನಂ.128 ಮತ್ತು 133 ಮತ್ತು ಹೊಯ್ಸಳಲು ಸರ್ವೆ ನಂ. 105ರಲ್ಲಿ ಭೂಮಿ ಗುರುತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ನಮಗೆ ಬೇರೆ ಸ್ಥಳದಲ್ಲಿ ಭೂಮಿ ನೀಡಬೇಕು. ಬಾಡಿಗೆ ಮನೆಯಲ್ಲಿ 36 ತಿಂಗಳು ಕಾಲ ಕಳೆದಿದ್ದೇವೆ. ಆದರೆ ಕೇವಲ 25 ಸಾವಿರ ರೂ. ಮಾತ್ರ ನಮಗೆ ಬಂದಿದೆ. ಬಾಡಿಗೆ ಹಣ ಮತ್ತು ಕೃಷಿ ಚಟುವಟಿಕೆಗೆ ಅನುಕೂಲವಾಗುವ ಭೂಮಿಯನ್ನೇ ನೀಡಬೇಕೆಂದು ನಿರಾಶ್ರಿತರು ಮನವಿ ಮಾಡಿದರು.
ತಹಶೀಲ್ದಾರ್ ನಾಗರಾಜು ಮಾತನಾಡಿ, ಬಣಕಲ್ ಸರ್ವೆ ನಂ. 353ರಲ್ಲಿ ಗೋಮಾಳ ಮತ್ತು ನೆಡುತೋಪು ಇರುವ 58 ಎಕರೆ ಬಿ.ಹೊಸಳ್ಳಿ ಸರ್ವೆ ನಂ. 65ರಲ್ಲಿ 51 ಎಕರೆ ಹುಲ್ಲುಬನ್ನ ಕರಾಬ್ ಜಾಗವಿದೆ. ಈ ಎರಡೂ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಪ್ಲಾಂಟೇಶನ್ ಮಾಡಲಾಗಿದೆ. ಇದನ್ನು ನಿರಾಶ್ರಿತರಿಗೆ ನೀಡಲು ಈ ಹಿಂದೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಅರಣ್ಯ ಇಲಾಖೆ ಪ್ಲಾಂಟೇಷನ್ ತೆರವುಗೊಳಿಸಿದರೆ ಈ ಭೂಮಿಯನ್ನೇ ನೀಡಬಹುದು ಎಂದು ಶಾಸಕರ ಗಮನಕ್ಕೆ ತಂದಾಗ, ಈ ಭೂಮಿಯನ್ನು ಪಡೆಯಲು ನಿರಾಶ್ರಿತರು ಒಪ್ಪಿಗೆ ಸೂಚಿಸಿದರು.
ಆಗ ಶಾಸಕ ಎಂ.ಪಿ. ಕುಮಾರಸ್ವಾಮಿ ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾ ಧಿಕಾರಿಗೆ ಕರೆ ಮಾಡಿ, ಈ ವಾರದಲ್ಲೇ ಬಣಕಲ್ ಮತ್ತು ಬಿ.ಹೊಸಳ್ಳಿಯಲ್ಲಿರುವ ಭೂಮಿಯನ್ನು ಪರಿಶೀಲಿಸಿ, ಅರಣ್ಯ ಇಲಾಖೆ ಮಾಡಿರುವ ಪ್ಲಾಂಟೇಶನ್ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಳಿಕ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಾಡಿಗೆ ಹಣವನ್ನು ನೀಡಲು ಈಗಾಗಲೇ ಜಿಲ್ಲಾ ಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರಕಾರ ಕೇವಲ 2 ಎಕರೆ ಮಾತ್ರ ಭೂಮಿ ನೀಡಲು ಆದೇಶಿಸಿದೆ. ಆದರೆ ರೈತರಿಗೆ ಅನ್ಯಾಯವಾಗಬಾರದೆಂದು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದು ಸಾಧ್ಯವಾದಷ್ಟು ಹೆಚ್ಚುವರಿ ಭೂಮಿ ನೀಡಲು ಪ್ರಯತ್ನಿಸುತ್ತೇನೆ. ಭೂಮಿ ಮಂಜೂರು ಮಾಡಿದ ಬಳಿಕ ಕೃಷಿ ಚಟುವಟಿಕೆಗೆ ಅಗತ್ಯವಾದ ಬೋರ್‌ವೆಲ್ ಕೊರೆಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ನಾಗರಾಜು, ನಿರಾಶಿತರಾದ ರಾಜು, ಸತೀಶ್, ಅಶ್ವತ್, ರಾಜೇಶ್, ಚಂದ್ರೇಗೌಡ, ಬಿಜೆಪಿ ಮುಖಂಡರಾದ ಪರೀಕ್ಷಿತ್ ಜಾವಳಿ, ಚಂದ್ರು ಸಾಲಿಯಾನ್, ವಿಕಾಸ್ ಹಂತೂರು ಮತ್ತಿತರರಿದ್ದರು.