Advertisement

ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ

03:09 PM Apr 27, 2022 | Team Udayavani |

ಚಿತ್ರದುರ್ಗ: ಸವಲತ್ತು ವಂಚಿತರ ಮನೆಬಾಗಿಲಿಗೆ ತೆರಳಿ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮವನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರ ಹಾಗೂ ಹಿರೇಗುಂಟನೂರು ಗ್ರಾಮದ ದ್ಯಾಮಲಾಂಬ ದೇವಸ್ಥಾನದ ಬಳಿ ಮಂಗಳವಾರ ಆಯೋಜಿಸಿದ್ದ ಕಂದಾಯ ಇಲಾಖೆಯಿಂದ ನೀಡುವ ಸಾಮಾಜಿಕ ಭದ್ರತಾ ಯೋಜನೆಯ ಮಂಜೂರಾತಿ ಆದೇಶಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗಳ ಮನೆಗಳಿಗೆ ತೆರಳಿ ಫಲಾನುಭವಿಗಳನ್ನು ಹುಡುಕಿ ಯೋಜನೆ ತಲುಪಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಈ ಪ್ರಕಾರ ಫಲಾನುಭವಿಗಳನ್ನು ಗುರುತಿಸಿ ಅರ್ಜಿ ಪಡೆದು ಮಾಸಾಶನಗಳನ್ನು ಮಂಜೂರು ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಮಾಜಿಕ ಭದ್ರತಾ ಯೋಜನೆಗಳಡಿ ನೀಡುವ ಮಾಸಾಶನಗಳ ಮೊತ್ತವನ್ನು ಹೆಚ್ಚಿಸಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಗಳಿಂದ ಜನರ ಬಾಳಲ್ಲಿ ನೆಮ್ಮದಿ ಮೂಡಿದೆ. ವೃದ್ಧರು, ಅಂಗವಿಕಲರು, ವಿಧವೆಯರಿಗೆ ಆಸರೆಯಾಗಿದೆ. ವೃದ್ಧರು ದೇಶದ ಆಸ್ತಿ, ದೇಶ ಕಟ್ಟುವಲ್ಲಿ ನಿಮ್ಮ ಪಾತ್ರ ಹಿರಿದು. ಮಕ್ಕಳಿಂದ ಪರಿತ್ಯಕ್ತರಾದವರ ಸಂಧ್ಯಾಕಾಲದ ಜೀವನ ಸುಗಮವಾಗಿ ನಡೆಸಲು ವೃದ್ಧಾಪ್ಯ ವೇತನ ಸಹಾಯಕವಾಗಿದೆ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಮಾಸಾಶನ ಜಮೆಯಾಗುತ್ತದೆ ಎಂದರು.

ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಹೊಸದಾಗಿ ಅರ್ಜಿ ಸಲ್ಲಿಸುವವರು ನವೋದಯ ಆ್ಯಪ್‌ ಮೂಲಕ ಅರ್ಜಿ ಸಲ್ಲಿಸಿದರೆ 45 ದಿನಗಳಲ್ಲಿ ಯೋಜನೆಯನ್ನು ಮಂಜೂರು ಮಾಡಿ ಫಲಾನುಭವಿಗಳ ಮನೆಬಾಗಿಲಿಗೆ ಆದೇಶಪತ್ರ ತಲುಪಿಸಲಾಗುವುದು. ಕೋವಿಡ್‌ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ, ತಹಶೀಲ್ದಾರ್‌ ಸತ್ಯನಾರಾಯಣ, ಉಪ ತಹಶೀಲ್ದಾರ್‌ ಫಾತೀಮಾ, ಹಿರೇಗುಂಟನೂರು ಉಪ ತಹಶೀಲ್ದಾರ್‌ ಪ್ರೇಮಲತಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ಸದಸ್ಯರಾದ ಲಾವಣ್ಯ, ಪವಿತ್ರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next