ಹಟ್ಟಿಚಿನ್ನದಗಣಿ: ಗಣಿ ಕಂಪನಿಯು ಪ್ರತಿದಿನ ಉತ್ಪಾದಿಸುವ ಚಿನ್ನದ ಪ್ರಮಾಣವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗಣಿ ಕಂಪನಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಗಣಿಕಂಪನಿಯು ದಿನಕ್ಕೆ 6 ಕೆ.ಜಿ ಚಿನ್ನ ಉತ್ಪಾದಿಸುತ್ತಿದ್ದು, ಇನ್ನುಮುಂದೆ 10 ರಿಂದ 11 ಕೆ.ಜಿ ಉತ್ಪಾದಿಸಲುವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ನಡೆದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಕಂಪನಿ ನೀಡುವ ಡಿಎಂಎಫ್ ಅನುದಾನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚಿಸಿ, ಯೋಜನೆ ರೂಪಿಸಲಾಗುವುದು. ವಂದಲಿ ಹೊಸೂರು ಕ್ರಾಸ್‌ನಿಂದ ಚಿಂಚರಿಕಿವರೆಗೆ 8.32 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ನಿರ್ದೇಶಕ ಮಂಡಳಿ ಸಭೆ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಮೃತ ಕಾರ್ಮಿಕ ಕುಟುಂಬದ ಅವಲಂಬಿತರಿಗೆ, ಗಣಿ ಕಂಪನಿಗೆ ಜಮೀನುಕಳೆದುಕೊಂಡ ಭೂ ಸಂತ್ರಸ್ತರಿಗೆ ಶೀಘ್ರದಲ್ಲೇ ಉದ್ಯೋಗ ನೀಡುವುದಾಗಿ ತಿಳಿಸಿದರು.
ಕೆಲವು ನ್ಯೂನ್ಯತೆಗಳಿರುವ ಕಾರಣ ವೈದ್ಯಕೀಯ ಅನರ್ಹತೆ ಆಧಾರದಡಿ ಉದ್ಯೋಗ ನೀಡಲು ವಿಳಂಬವಾಗುತ್ತಿದ್ದು, ಪರಿಶೀಲಿಸಿ ಜಾರಿಗೆ ತರುವುದಾಗಿ ತಿಳಿಸಿದರು.
ಪ್ರತಿ ವರ್ಷ ಕಾರ್ಮಿಕರಿಗೆ ನೀಡುತ್ತಿದ್ದ ಬೋನಸ್ ಹಣ ಡಿ.25ರೊಳಗೆ ಕಾರ್ಮಿಕರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಗಣಿ ಕಂಪನಿ ನಿರ್ದೇಶಕ ಶ್ರೀನಿವಾಸ್‌ರಾಜ್ ದೇಸಾಯಿ, ಮುಖಂಡರಾದ ಗುಂಡಪ್ಪಗೌಡಪೊಲೀಸ್‌ಪಾಟೀಲ್, ಪರಮೇಶ್ ಯಾದವ, ರಮೇಶ ಉಳಿಮೇಶ್ವರ್, ವೆಂಕೋಬ್ ಪವಾಡೆ, ಅಧಿಕಾರಿ ವಿಶ್ವನಾಥ ನಾಯಕ ಇದ್ದರು.