ಬೆಂಗಳೂರು: ಆಯುರ್ವೇದ ಮತ್ತು ಅಲೋಪತಿ ವೈದ್ಯ ಪದ್ಧತಿಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಹೇಳಿದ್ದಾರೆ. ಜತೆಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುರ್ವೇದ ಔಷಧಿ, ಚಿಕಿತ್ಸೆ ಕುರಿತು ಮಾಹಿತಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆಯುಷ್ ಇಲಾಖೆ ವತಿಯಿಂದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಮಂದಿ ಬಡ ರೋಗಿಗಳು ಇದ್ದಾರೆ. ಅಲೋಪತಿ ಪದ್ದತಿ ಅನೇಕರಿಗೆ ಒಗ್ಗಿಕೊಳ್ಳುವುದಿಲ್ಲ. ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಹೀಗಾಗಿ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ ಹೆಚ್ಚು ಸೂಕ್ತ. ವೆಚ್ಚವೂ ಕಡಿಮೆ. ಆದ್ದರಿಂದ ಆಯುರ್ವೇದಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ನಗರದಲ್ಲಿರುವ ಆಯುರ್ವೇದ ವಿದ್ಯಾಲಯದ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಫಲಕ, ಸ್ವತ್ಛತೆ, ಸುತ್ತಮುತ್ತಲಿನ ಪ್ರದೇಶ ಸೇರಿ ಎಲ್ಲವೂ ಅಭಿವೃದ್ಧಿಯಾಗಬೇಕಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಆಯುರ್ವೇದ ವಿದ್ಯಾಲಯವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕು.
ಅನುದಾನಗಳು ದುರ್ಬಳಕೆಯಾಗದಂತೆ ಎಚ್ಚರವಹಿಸುವ ಜತೆಗೆ, ರೋಗಿಗಳಿಗೆ ಪೂರಕ ಮಾಹಿತಿ, ಚಿಕಿತ್ಸೆ, ಹೊಸ ಸಂಶೋಧನೆಗಳು ನಡೆಸುವ ಕೆಲಸಗಳನ್ನು ಯುವ ವೈದ್ಯರುಗಳು ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆ ನಿರ್ದೇಶಕ ಡಾ. ರತನ್ ಕೇಲ್ಕರ್, ಆಯುಕ್ತ ಮನೋಜ್ ಕುಮಾರ್ ಮೀನ, ಪಾಲಿಕೆ ಸದಸ್ಯೆ ಆರ್.ಜೆ.ಲತಾ ಮತ್ತಿತರರು ಇದ್ದರು.