Advertisement

ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ

10:24 AM Apr 01, 2022 | Team Udayavani |

ಅಳ್ನಾವರ: ಕಾಳಿ ನದಿಯಿಂದ ನೀರು ಬರುವ ಪೂರ್ವದ ದಿನಗಳಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದ ಹಾಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಹಶೀಲ್ದಾರ್‌ ಅಮರೇಶ ಪಮ್ಮಾರ ಹೇಳಿದರು.

Advertisement

ಸ್ಥಳಿಯ ಪಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಇನ್ನೂ ಎರಡು ವಾರಕ್ಕೆ ಬೇಕಾಗುವಷ್ಟು ನೀರು ಡವಗಿ ನಾಲಾದಲ್ಲಿ ಸಂಗ್ರಹ ಇದೆ. ಅಷ್ಟರಲ್ಲೇ ಕಾಳಿ ನದಿ ನೀರು ಬರುವ ಮುನ್ಸೂಚನೆ ಇದೆ. ಅವಶ್ಯ ಬಿದ್ದರೆ ಹೂಲಿಕೇರಿ ಇಂದಿರಮ್ಮನ ಕೆರೆಯಿಂದ ನೀರು ತಂದು ಜನತೆಗೆ ನೀಡಲಾಗುವುದು. ಕಾಳಿ ನದಿಯಿಂದ ನೀರು ತರುವ ಯೋಜನೆ ಮುಕ್ತಾಯದ ಹಂತದಲ್ಲಿದೆ. ಅಂತಿಮ ಹಂತದ ಕೆಲಸ ವೇಗವಾಗಿ ನಡೆಯುತ್ತಿದೆ ಎಂದರು.

ಸದಸ್ಯ ಛಗನ್‌ ಪಟೇಲ್‌ ಮಾತನಾಡಿ, ಪಟ್ಟಣದಲ್ಲಿ ಸ್ವತ್ಛತೆ ಕಾರ್ಯ ಸರಿಯಾಗಿ ನಿಭಾಯಿಸಲು ಹೆಚ್ಚಿನ ಕೂಲಿಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಬೇಕು. ಮಳೆಗಾಲ ಆರಂಭಕ್ಕೂ ಮುನ್ನ ಟೆಂಡರ್‌ ಆದ ಎಲ್ಲ ಕಾಮಗಾರಿ ಮುಗಿಸುವಂತೆ ನೋಡಿಕೊಳ್ಳಬೇಕು. ಪೌರ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಪರಿಕರ ಒದಗಿಸಬೇಕು ಎಂದು ಹೇಳಿದರು.

ಸದಸ್ಯ ಅಮೂಲ ಗುಂಜೀಕರ ಮಾತನಾಡಿ, ಆರ್‌ಒ ಪ್ಲಾಂಟ್‌ನಲ್ಲಿ ದಿನಾಲು ಶೇಖರಣೆ ಆಗುವ ಹಣದ ಬಗ್ಗೆ ಸದಸ್ಯರಿಗೆ ಸರಿಯಾಗಿ ಲೆಕ್ಕಪತ್ರ ಮಾಹಿತಿ ನೀಡಬೇಕು. ಹೊಸದಾಗಿ ಮನೆ ಕಟ್ಟಿಕೊಳ್ಳುವವರು ನಿಯಮಗಳನ್ನು ಪಾಲಿಸಬೇಕು. ಪಟ್ಟಣಕ್ಕೆ ಸಂಪರ್ಕ ನೀಡುವ ಅಪ್ರೋಚ್‌ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ಶೇ.3 ಪರಿಷ್ಕರಣೆ,ಲೈಸೆನ್ಸ್‌ ಫೀ ಹೆಚ್ಚಳಕ್ಕೆ ಸಭೆ ಸೂಚಿಸಿತು. ಪಟ್ಟಣದಲ್ಲಿ ಆಸ್ತಿ ತೆರಿಗೆ 51 ಲಕ್ಷದಲ್ಲಿ ರೂ.ದಲ್ಲಿ 44 ಲಕ್ಷ ರೂ.ಹಾಗೂ ನೀರಿನ ಕರ 51ಲಕ್ಷದಲ್ಲಿ ರೂ.ದಲ್ಲಿ 27 ಲಕ್ಷ ವಸೂಲಿ ಆಗಿದೆ ಎಂದು ಎಸ್‌.ಆರ್‌. ಹಿರೇಹಾಳ ತಿಳಿಸಿದರು.

Advertisement

ಹಿರಿಯ ಸದಸ್ಯ ರೂಪೇಶ ಗುಂಡಕಲ್‌ ಮಾತನಾಡಿ, ಮರಾಠಾ ಸಮಾಜದಲ್ಲಿನ ಶವಸಂಸ್ಕಾರಕ್ಕೆ ಇನ್ನೊಂದು ಶೆಡ್‌ ನಿರ್ಮಿಸಬೇಕು. ಆಶ್ರಯ ಕಾಲನಿಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಎಂ.ಸಿ.ಪ್ಲಾಟ್‌ ಗಾರ್ಡನ್‌ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದರು.

ಎಸ್‌ಎಫ್‌ಸಿ ಯೋಜನೆಯಡಿ 12.4 ಲಕ್ಷ ರೂ. ಗಳಿಗೆ ಕ್ರಿಯಾ ಯೋಜನೆ, ಸ್ವತ್ಛ ಭಾರತ ಮಿಶನ್‌ ಅಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು 38.74 ಲಕ್ಷ ರೂ. ಅನುದಾನಕ್ಕೆ ಅರ್ಜಿ ಕರೆಯಲು ವಿವಿಧ ಯೋಜನೆಯಡಿ ಕರೆಯಲಾದ ಟೆಂಡರ್‌ ಕಾಮಗಾರಿಗಳಿಗೆ ಅಡಳಿತಾತ್ಮಕ ಅನುಮೋದನೆ ನೀಡಲಾಯಿತು. ಎಸ್‌ಎಫ್‌ಸಿ ಯೋಜನೆಯಡಿ ಶೇ. 24.10 ರ ಯೋಜನೆಯಡಿ ಬಾಕಿ ಉಳಿದ 99 ಲಕ್ಷ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಲಾಯಿತು. ಶೇ.5ರಲ್ಲಿ ದಿವ್ಯಾಂಗರಿಗೆ, ಶೇ.7.5 ರ ಯೋಜನೆಯಡಿ ಡೆ ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆದ ಫಲಾನುಭವಿಗಳಿಗೆ ಸಹಾಯಧನ ವಂತಿಕೆ ನೀಡಲು ಒಪ್ಪಿಗೆ ನೀಡಲಾಯಿತು.

ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಮುಖ್ಯಾಧಿಕಾರಿ, ತಹಶೀಲ್ದಾರ್‌ ಅಮರೇಶ ಪಮ್ಮಾರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಯಲಕಪಾಟಿ, ಸದಸ್ಯರಾದ ರೇಶ್ಮಿ ತೇಗೂರ, ಸುನಂದಾ ಕಲ್ಲು, ಭಾಗ್ಯವತಿ ಕುರುಬರ, ಜೈಲಾನಿ ಸುದರ್ಜಿ, ನೇತ್ರಾವತಿ ಕಡಕೋಳ, ನೌಸಿನ ಗೋರಿ, ಅಂಜಲಿನ್‌ ಬೆರೆಟ್ಟೊ, ಮಂಗಳಾ ರವಳಪ್ಪನವರ, ತಮೀಮ ತೇರಗಾಂವ, ರಮೇಶ ಕುನ್ನೂರಕರ, ಯಲ್ಲಪ್ಪ ಹೂಲಿ, ಮಧು ಬಡಸ್ಕರ್‌, ರೂಪೇಶ ಗುಂಡಕಲ್‌, ಛಗನಲಾಲ ಪಟೇಲ, ಅಮೂಲ ಗುಂಜೀಕರ, ನಾಮ ನಿರ್ದೇಶನ ಸದಸ್ಯರಾದ ಅಶೋಕ ಬರಗುಂಡಿ, ಅನ್ನಪೂರ್ಣಾ ಕೌಜಲಗಿ, ಪ್ರತಾಪ ಕಲಾಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next