Advertisement

ಗೊಂದಲದ ಸುದ್ದಿ ಪ್ರಸಾರ ಮಾಡಿದರೆ ಕ್ರಮ: ಜಿಲ್ಲಾಧಿಕಾರಿ

10:10 PM Sep 08, 2020 | mahesh |

ಉಡುಪಿ: ಸ್ಥಳೀಯ ಕೇಬಲ್‌ ವಾಹಿನಿ ಮತ್ತು ಸಾಮಾಜಿಕ ತಾಣಗಳು ಸಮಾಜದಲ್ಲಿ ಗೊಂದಲ ಉಂಟುಮಾಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣ
ದಲ್ಲಿ ನಡೆದ ಜಿಲ್ಲಾ ಕೇಬಲ್‌ ಟೆಲಿವಿಷನ್‌ ನಿರ್ವಹಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಅಪಪ್ರಚಾರದಿಂದ ಐಸಿಯು ಬೆಡ್‌ ಕೊರತೆ
ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳು ಪ್ರಸಾರ ಮಾಡಿದ ಅಪಪ್ರಚಾರದಿಂದ ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆಗೆ ಸಾರ್ವಜನಿಕರು ಅಸಹಕಾರ ತೋರುತ್ತಿದ್ದಾರೆ. ಇದರಿಂದ ರೋಗದ ಗಂಭೀರ ಪರಿಣಾಮ ಎದುರಿಸುವ ರೋಗಿಗಳ ಸಂಖ್ಯೆ ಅಧಿಕವಾಗಿ ಐಸಿಯು ಬೆಡ್‌ಗಳ ಕೊರತೆಯಾಗಿದೆ. ಇಂತಹ ಸುದ್ದಿ ಪ್ರಸಾರ ಮಾಡುವಾಗ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನೂ ಸಹ ಪ್ರಸಾರ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಡಿಸಿ ತಿಳಿಸಿದರು.

ದರ ವ್ಯತ್ಯಾಸ-ದೂರು ಕೋಶ
ಕೇಬಲ್‌ ಟಿವಿ ಶುಲ್ಕ ಪಡೆಯುವ ಬಗ್ಗೆ ವ್ಯತ್ಯಾಸವಿದ್ದು ಗ್ರಾಹಕರಿಂದ ಹೆಚ್ಚಿನ ದರ ಪಡೆಯುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸುವಂತೆ ಸಮಿತಿ ಸದಸ್ಯೆ ತಾರಾ ತಿಮ್ಮಯ್ಯ ತಿಳಿಸಿದರು. ಹೆಚ್ಚಿನ ದರ ಪಡೆಯುವ ಬಗ್ಗೆ ಮತ್ತು ಕೇಬಲ್‌ ವಾಹಿನಿಗಳಲ್ಲಿ ಅನಪೇಕ್ಷಿತ ಕಾರ್ಯಕ್ರಮ ಪ್ರಸಾರವಾಗುತ್ತಿರುವ ಬಗ್ಗೆ ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆರಂಭಿಸಿರುವ ದೂರು ಕೋಶಕ್ಕೆ (ದೂ.ಸಂ. 2985242) ಸಾರ್ವ
ಜನಿಕರು ಲಿಖೀತ ದೂರು ದಾಖಲಿಸು ವಂತೆ ವಾರ್ತಾಧಿಕಾರಿ ಮಂಜುನಾಥ್‌ ಬಿ. ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ.ವಿ. ಭಟ್‌, ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ, ಮನಃಶಾಸ್ತ್ರಜ್ಞ ಡಾ| ವಿರೂಪಾಕ್ಷ ದೇವರಮನೆ, ವಿಶ್ವಾಸದ ಮನೆಯ ಸುನಿಲ್‌ ಜಾನ್‌ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.

ನೆಟ್‌ವರ್ಕ್‌ ಕಾಯ್ದೆ ಉಲ್ಲಂಘಿಸಿದಲ್ಲಿ ಕ್ರಮ
ಜಿಲ್ಲೆಯಲ್ಲಿನ ಸ್ಥಳೀಯ ಕೇಬಲ್‌ ಟಿವಿ ಸಹ ಮನೋರಂಜನೆ ಹೊರತು ಪಡಿಸಿ, ನ್ಯೂಸ್‌ ಪ್ರಸಾರ ಮಾಡಲು ಅನುಮತಿ ಪಡೆದಿರುವ ಬಗ್ಗೆ ಸಂಬಂಧಪಟ್ಟ ಚಾನೆಲ್‌ ಮುಖ್ಯಸ್ಥರು ದಾಖಲೆ ನೀಡುವಂತೆ ನೋಟಿಸ್‌ ಜಾರಿಗೊಳಿಸಿ. ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್‌ ಕಾಯ್ದೆ ಉಲ್ಲಂಘಿಸಿದಲ್ಲಿ ಕೇಬಲ್‌ ಆಪರೇಟರ್‌ಗಳ ಉಪಕರಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next