Advertisement

Congress ಕಾರ್ಯಕರ್ತರೇ ಲಂಚ ಪಡೆದರೂ ಕ್ರಮ: ಡಿಕೆಶಿ ಎಚ್ಚರಿಕೆ

09:28 PM Jun 20, 2023 | Team Udayavani |

ಬೆಂಗಳೂರು: ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿಗಳಿಗೆ ಫ‌ಲಾನುಭವಿಗಳ ಅರ್ಜಿ ಭರ್ತಿ ಮಾಡಲು ಯಾರೂ ಲಂಚ ಸ್ವೀಕರಿಸಕೂಡದು. ಒಂದು ವೇಳೆ ಲಂಚ ಪಡೆದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಕಾರ್ಯಕರ್ತರೇ ಅಕ್ರಮದಲ್ಲಿ ಭಾಗಿಯಾದರೂ ಪ್ರಕರಣ ದಾಖಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಸಿದರು.

Advertisement

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿ, ಎಷ್ಟು ಪಾರದರ್ಶಕವಾಗಿ ಯೋಜನೆ ಜಾರಿ ಮಾಡಲು ಸಾಧ್ಯವೋ ಅಷ್ಟು ಪಾರದರ್ಶಕವಾಗಿ ಮಾಡಲಾಗುವುದು. ಯಾರಿಗೆ ಯೋಜನೆ ಬೇಡ ಎಂದು ತೀರ್ಮಾನಿಸುತ್ತಾರೆ ಅವರ ಹೊರತುಪಡಿಸಿ ಉಳಿದವರು ಈ ಯೋಜನೆಗೆ ಅರ್ಜಿ ತುಂಬಬೇಕು. ಗೃಹಜ್ಯೋತಿ ಯೋಜನೆ ನೋಂದಣಿ ಈಗಷ್ಟೇ ಆರಂಭವಾಗಿದೆ. ಎಲ್ಲರೂ ತಾಳ್ಮೆಯಿಂದ ನೋಂದಣಿ ಮಾಡಿಕೊಳ್ಳಬೇಕು. ಎಲ್ಲರಿಗೂ ಈ ಯೋಜನೆ ಸಿಗಲಿದೆ ಎಂದು ಭರವಸೆ ನೀಡಿದರು.

ಈಗಾಗಲೇ ಗೃಹಜ್ಯೋತಿ ಅಡಿ ನಿರೀಕ್ಷೆ ಮೀರಿ ಅರ್ಜಿ ಸಲ್ಲಿಕೆಯಾಗುತ್ತಿವೆ. ಆತಂಕಗೊಂಡು ಎಲ್ಲರೂ ಏಕಕಾಲದಲ್ಲಿ ಮುಗಿಬೀಳುವುದು ಬೇಡ. ಇದರಿಂದ ಸರ್ವರ್‌ ಮೇಲೆ ಒತ್ತಡ ಉಂಟಾಗುತ್ತದೆ ಎಂದ ಅವರು, ಆತುರದಿಂದ ತಾಂತ್ರಿಕ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಗೃಹಲಕ್ಷ್ಮೀ ಯೋಜನೆಗೆ ಕಾಲಾವಕಾಶ ಪಡೆದು ಜಾರಿ ಮಾಡಲಾಗುತ್ತಿದೆ. ಬಾಪು ಕೇಂದ್ರ, ಪಂಚಾಯ್ತಿ ಕೇಂದ್ರ ಹಾಗೂ ಸ್ವಂತ ಮೊಬೈಲ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದರ ಜತೆಗೆ ಪಕ್ಷದ ಕಾರ್ಯಕರ್ತರು ಜನಪ್ರತಿನಿಧಿಗಳು ಮನೆ-ಮನೆಗೆ ತೆರಳಿ ಪಕ್ಷಬೇಧ ಮರೆತು ಈ ಯೋಜನೆ ಅರ್ಜಿ ತುಂಬಬೇಕು. ಪ್ರತಿ ಬೂತ್‌ ಮಟ್ಟದಲ್ಲಿ ಓರ್ವ ವಿದ್ಯಾವಂತ ಮಹಿಳೆ ಹಾಗೂ ಪುರುಷ ಪ್ರತಿ ಮನೆಗೆ ಹೋಗಿ ಅರ್ಜಿ ತುಂಬಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next