ಕಾಗವಾಡ: ಮತಕ್ಷೇತ್ರದ ಕನಸ್ಸಿನ ಕೂಸಾದ ಬಸವೇಶ್ವರ ಏತ ನೀರಾವರಿ ಯೋಜನೆ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ನಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಐನಾಪುರದಲ್ಲಿ ಸೋಮವಾರ ಕಾಗವಾಡ ಕ್ಷೇತ್ರ ಶಾಸಕ, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ, ಅಥಣಿ ಶಾಸಕ ಮಹೇಶ ಕುಮಠಳ್ಳಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ 1286.31 ಕೋಟಿ ರೂ. ವೆಚ್ಚದ ಬೃಹತ್ ಬಸವೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ನಂತರ ಅವರು ಮಾತನಾಡಿದರು.
ಕಾಗವಾಡ ಮತ್ತು ಅಥಣಿ ತಾಲೂಕಿನ 22 ಗ್ರಾಮಗಳಿಗೆ ನೀರಾವರಿ ಸೌಲಭ್ಯ ಈ ಯೋಜನೆ ಮುಖಾಂತರ ದೊರೆಯಲಿದೆ. ಇಲ್ಲಿಯ 27 ಸಾವಿರ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ಅನೇಕರು ಈ ಯೋಜನೆ ಪೂರ್ಣಗೊಂಡ ನಂತರ ಈ ಭಾಗ ನೀರಾವರಿ ಕ್ಷೇತ್ರವಾಗಿ ಪರಿವರ್ತನೆಗೊಳ್ಳಲಿದೆ ಎಂಬ ಆಸೆ ಇಟ್ಟುಕೊಂಡಿದ್ದಾರೆ. ಆದರೆ, ಗುತ್ತಿಗೆದಾರರ ನಿರ್ಲಕ್ಷéದಿಂದ ಯೋಜನೆಗೆ ಹಿನ್ನಡೆಯಾಗಿದೆ ಎಂದರು.
ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಮಾತನಾಡಿ, ಬಸವೇಶ್ವರ ಏತ ನೀರಾವರಿ ಯೋಜನೆ ಸಾವಿರಾರು ರೈತರ ಜೀವನ ದಾಹಿನಿಯಾಗಿದೆ. ಈಗಲೂ ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಅವರಿಗೆ ನೀರು ಕೊಡುವುದು ನಮ್ಮ ಕರ್ತವ್ಯ. ಮದಬಾವಿ ಜಿಪಂ ಕ್ಷೇತ್ರ ವ್ಯಾಪ್ತಿಯ ಹನಮಾಪುರ ಮತ್ತು ಇನ್ನಿತರ ಗ್ರಾಮಗಳ ಕ್ಷೇತ್ರ ಕಮಾಂಡ್ ಏರಿಯಾದಲ್ಲಿದೆ. ಅಧಿ ಕಾರಿಗಳು ಇದನ್ನು ಕೈಬಿಟ್ಟಿದ್ದಾರೆ. ಇದನ್ನು ಸಚಿವರು ವೀಕ್ಷಿಸಿ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.
ಗಾಯತ್ರಿ ಕಂಪನಿಯ ವ್ಯವಸ್ಥಾಪಕ ಎಂ.ವ್ಹಿ. ಶೇಖರ, ನೀರಾವರಿ ಇಲಾಖೆಯ ಬಿ.ಎಸ್. ಚಂದ್ರಶೇಖರ, ಕಾರ್ಯಪಾಲ ಅಭಿಯಂತ ಕೆ.ಕೆ. ಜಾಲಿಬೇರಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಅರುಣ ಯಲಗುದ್ರಿ, ಸಿ.ಡಿ. ಕಿನಿಂಗೆ, ಪ್ರವೀಣ ಹುಂಚಿಕಟ್ಟಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಸಾಗರ ಪವಾರ ಅವರು ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರಾಜಕೀಯ ಮುಖಂಡರಾದ ಕಿರಣಕುಮಾರ ಪಾಟೀಲ, ಶ್ರೀನಿವಾಸ ಪಾಟೀಲ, ಶೀತಲ ಪಾಟೀಲ, ಪ್ರವೀಣ ಹೊಸುರೆ, ಅಪ್ಪಾಸಾಹೇಬ ಅವತಾಡೆ, ವಿನಾಯಕ ಬಾಗಡಿ, ಆರ್.ಎಂ. ಪಾಟೀಲ, ಸುಶಾಂತ ಪಾಟೀಲ ಇದ್ದರು.