ಬಂಟ್ವಾಳ: ಪುರಸಭೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನೇತ್ರಾವತಿ ನದಿ ಆಳ ಪ್ರದೇಶದ ನೀರನ್ನು ಪಂಪಿಂಗ್ ಮಾಡುವ ಮೂಲಕ ಜಕ್ರಿಬೆಟ್ಟು ಜ್ಯಾಕ್‌ವೆಲ್‌ಗೆ ಹರಿಸಿ ಅಲ್ಲಿಂದ ನೀರೆತ್ತುವ ಕ್ರಮ ಕೈಗೊಂಡಿದೆ. ನೀರು ಹರಿಯಲು ನದಿ ಪಾತ್ರದಲ್ಲಿ ತಡೆಯಾಗುವ ಶಿಲೆ ಮತ್ತು ಮರಳು ದಿನ್ನೆಯ ತಡೆ ತೆರವುಗೊಳಿಸುವ ಬಗ್ಗೆ ಪುರಸಭಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ. ಅವರು ಮಂಗಳವಾರ ನದಿಪಾತ್ರದ ಜಕ್ರಿಬೆಟ್ಟು ಪಂಪಿಂಗ್ ಸ್ಥಾವರ ವ್ಯಾಪ್ತಿಯಲ್ಲಿ ಸಂಚರಿಸಿ ನೀರಿನ ಆಳ ಪ್ರದೇಶದ ವೀಕ್ಷಣೆ, ನೀರೆತ್ತಲು ಮಾಡಿರುವ ಪ್ರಯತ್ನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಮಸ್ಯೆ ಪರಿಹರಿಸಲು ಕ್ರಮ
ನದಿಯಲ್ಲಿ ನೀರ ಹರಿವು ನಿಲುಗಡೆ ಆಗಿದೆ. ಆದರೆ ಪುರಸಭೆಗೆ ಒಂದು ಹೊತ್ತಿನ ನೀರನ್ನು ಹರಿಸಲು ಪಂಪಿಂಗ್ ಕ್ರಮ ಕೈಗೊಂಡು ನೀರು ಒದಗಿಸುವ ಮೂಲಕ ಪರಿಹಾರ ಕಾಣಲಾಗಿದೆ. ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಅವರು ನದಿಯ ಆಳದಲ್ಲಿ ನಿಂತಿರುವ ನೀರನ್ನು ಪಂಪಿಂಗ್ ಮಾಡಿಸುವಲ್ಲಿ ಪ್ರಯತ್ನಿಸಿದ್ದು ಗಂಭೀರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಂಡಿದ್ದಾಗಿ ತಿಳಿಸಿದರು.
ಈ ಉದ್ದೇಶಕ್ಕೆ ಕಳೆದ ಎರಡುವಾರ ಗಳಿಂದ ಸ್ವತಃ ನದೀಪಾತ್ರದಲ್ಲಿ ಪ್ರತೀದಿನ ಸಂಚರಿಸಿ ನೀರಿನ ಲಭ್ಯತೆಯ ಕುರಿತು ಗಮನಿಸಿ ಕ್ರಮ ಕೈಗೊಂಡಿದೆ. ಹಾಗಾಗಿ ಜಕ್ರಿಬೆಟ್ಟು ಸ್ಥಾವರ ಮೂಲಕ ನೀರನ್ನು ಒದಗಿಸುವಲ್ಲಿ ಒಂದಷ್ಟು ಪ್ರಯೋಜನ ಆಗಿದೆ ಎಂದರು. ಶಾಸಕರ ಜತೆಯಲ್ಲಿ ಸ್ವತಃ ಎ.ಸಿ. ರವಿಚಂದ್ರ ನಾಯಕ್ ಕೂಡಾ ನದಿಗುಂಟ ದಲ್ಲಿ ಸಂಚರಿಸಿ ಆಳ ಪ್ರದೇಶದಲ್ಲಿ ಇರುವಂತಹ ನೀರನ್ನು ಜಕ್ರಿಬೆಟ್ಟು ಪಂಪಿಂಗ್ ಮೂಲಕ ಜ್ಯಾಕ್‌ವೆಲ್‌ಗೆ ಹರಿಸುವ ಕ್ರಮವನ್ನು ವೀಕ್ಷಿಸಿದರು.
ನದಿ ಆಳ ಪ್ರದೇಶದಲ್ಲಿ ಇರುವಂತಹ ನೀರನ್ನು ಹರಿಸುವಾಗ ಸಾಕಷ್ಟು ವೆಚ್ಚ ಆಗುವುದರಿಂದ ಅದನ್ನು ಜಿಲ್ಲಾಡಳಿತ ಭರಿಸಿದರೆ ಮಾತ್ರ ಗಂಭೀರ ಪ್ರಯತ್ನ ಮಾಡಲು ಸಾಧ್ಯ. ಈ ಬಗ್ಗೆ ಹಲವಾರು ಸಲ ಜಿಲ್ಲಾಧಿಕಾರಿಗಳಿಗೆ ಮೌಖೀಕವಾಗಿ ತಿಳಿಸಿದ್ದರೂ ಅವರಿಂದ ಪ್ರತಿಕ್ರಿಯೆ ಇಲ್ಲ ವಾಗಿದೆ. ನೀರು ಒದಗಿಸುವಲ್ಲಿ ನಡೆದಿರುವ ಪ್ರಯತ್ನದ ಬಗ್ಗೆ ಸಾರ್ವಜನಿಕರು ಗಮನಿಬೇಕು. ಸಹಾಯಕ ಕಮಿಷನರ್ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಗಮನಿಸಿ ಜಿಲ್ಲಾಧಿಕಾರಿಗೆ ವಿವರ ನೀಡುವುದಾಗಿ ತಿಳಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕರ ಜತೆಗಿದ್ದ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ತಿಳಿಸಿದ್ದಾರೆ. ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ, ಎಂಜಿನಿಯರ್ ಡೊಮಿನಿಕ್ ಡಿ’ಮೆಲ್ಲೊ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಪ್ರಮುಖರಾದ ರಮಾನಾಥ ರಾಯಿ, ಪವನ್ ಕುಮಾರ್ ಶೆಟ್ಟಿ, ಮಂಜು ಮತ್ತಿತರರು ಉಪಸ್ಥಿತರಿದ್ದರು.