Advertisement

ಜನರ ದೂರಿಗೆ ಸ್ಪಂದಿಸದಿದ್ದರೆ ಕ್ರಮ: ಎಚ್ಚರಿಕೆ

05:31 AM May 31, 2020 | Lakshmi GovindaRaj |

ಬೆಂಗಳೂರು: ಸಾರ್ವಜನಿಕರ ಕರೆ ಆಧರಿಸಿ ತಕ್ಷಣ ಅವರ ಸಮಸ್ಯೆಗೆ ಸ್ಪಂದಿಸದಿದ್ದರೆ ಹಾಗೂ ನಗರ ಪ್ರದಕ್ಷಿಣೆ ವೇಳೆ ಕರ್ತವ್ಯ ಲೋಪ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅಧಕಾರಿಗಳಿಗೆ ಎಚ್ಚರಿಕೆ ನೀಡಿದರು.

Advertisement

ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಪೊಲೀಸ್‌ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆ ನಡೆಸಿ  ಅವರು ಕೆಲ ಸೂಚನೆ ನೀಡಿದರು. ನಗರದಲ್ಲಿ ಮಳೆಯಾಗುತ್ತಿದ್ದು, ಬಿಬಿಎಂಪಿ ಸಹಾಯವಾಣಿ, ನಿಯಂತ್ರಣ ಕೊಠಡಿಗೆ ಸಾರ್ವಜನಿಕರಿಂದ ಬರುವ ದೂರಿನ  ಕರೆಗಳಿಗೆ ತಕ್ಷಣ ಸ್ಪಂದಿಸಬೇಕು. ಕರೆ ಸ್ಪಂದಿಸದಿರುವ ಬಗ್ಗೆ ದೂರುಗಳು  ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

 ಎರಡು ದಿನದಲ್ಲಿ ತೆರವಿಗೆ ಸೂಚನೆ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಮೃತಪಟ್ಟ ಇಬ್ಬರು ಹೆಣ್ಣು ಮಕ್ಕಳ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ ತಲಾ 5 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ನಗರದಲ್ಲಿ ಮಳೆಯಿಂದ ಬಿದ್ದ ಮರಗಳನ್ನು ಎರಡು ದಿನದಲ್ಲಿ ತೆರವುಗೊಳಿಸಬೇಕು ಎಂದು ಸೂಚಿಸಿದರು.

ನಗರ ಸಂಚಾರ: ನಗರ ಸಂಚಾರ ನಡೆಸುವ ವೇಳೆ ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ನಗರದಲ್ಲಿ ಯಾವುದೇ ಸಾವು- ನೋವು ಸಂಭವಿಸದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು  ಎಂದು ತಾಕೀತು ಮಾಡಿದರು.

ಸಮನ್ವಯದ ಕಾರ್ಯ ನಿರ್ವಹಣೆಗೆ ಸೂಚನೆ: ಬಿಬಿಎಂಪಿ, ಪೊಲೀಸ್‌, ಅರಣ್ಯ, ಸಾರಿಗೆ, ಅಗ್ನಿಶಾಮಕ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಮರಗಳ ಕೆಳಗೆ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಮುನ್ನೆಚ್ಚರಿಕೆ ವಹಿಸಿ ಅನಾಹುತಗಳನ್ನು ತಡೆಗಟ್ಟಲು ಕ್ರಮ ವಹಿಸಬೇಕು.

Advertisement

ನಗರದ 8 ವಲಯಗಳಲ್ಲಿನ ಮ್ಯಾನ್‌ಹೋಲ್‌ ಗಳನ್ನು ಮುಚ್ಚುವ ಜತೆಗೆ ಜಟ್ಟಿಂಗ್‌ ಯಂತ್ರಗಳನ್ನು ಸನ್ನದ ಸ್ಥಿತಿಯಲ್ಲಿಟ್ಟುಕೊಂಡಿರಬೇಕು ಎಂದು ಸೂಚನೆ  ನೀಡಿದರು. ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ನಗರದ ಎಲ್ಲ ಎಂಟು ವಲಯಗಳಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿ/ ಸಿಬ್ಬಂದಿಯನ್ನು ಒಳಗೊಂಡ ತಂಡ  ರಚಿಸಬೇಕು.

ಈ ತಂಡಗಳು ಮಳೆ ಸಂಬಂಧಿತ ದೂರುಗಳಿಗೆ ಸ್ಪಂದಿಸಿ ತಕ್ಷಣ ಕ್ರಮ ವಹಿಸಬೇಕು. ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಸಹಾಯಕ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು. ಸಚಿವ ಬೈರತಿ ಬಸವರಾಜ್‌, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next