Advertisement

ವಲಸಿಗರ ಕರೆದೊಯ್ಯಲು ಸಿದ್ಧ; ಯು.ಕೆ.ಸಚಿವೆ ಸುಯೆಲ್ಲಾ ಟೀಕೆಗೆ ಭಾರತದ ಹೈಕಮಿಷನ್‌ ತಿರುಗೇಟು

07:38 PM Oct 07, 2022 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ವೀಸಾ ಅವಧಿ ಮುಕ್ತಾಯವಾಗಿ ವಾಸಿಸುತ್ತಿರುವವ ಸಂಖ್ಯೆಯಲ್ಲಿ ಭಾರತೀಯರೇ ಅಧಿಕ ಎಂಬ ಗೃಹ ಸಚಿವೆ ಸುಯೆಲ್ಲಾ ಬ್ರಾವರ್ಮನ್‌ ಹೇಳಿಕೆಗೆ ಲಂಡನ್‌ನಲ್ಲಿ ಇರುವ ಭಾರತೀಯ ಹೈಕಮಿಷನ್‌ ತಿರುಗೇಟು ನೀಡಿದೆ.

Advertisement

ವೀಸಾ ಅವಧಿ ಮುಗಿದಿರುವ ಭಾರತೀಯ ವಲಸಿಗರನ್ನು ವಾಪಸು ಭಾರತಕ್ಕೆ ಕರೆದೊಯ್ಯಲು ಬ್ರಿಟನ್‌ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಸಹಿ ಹಾಕಲಾಗಿದ್ದ ಮೈಗ್ರೇಷನ್‌ ಮತ್ತು ಮೊಬಿಲಿಟಿ ಪಾರ್ಟ್‌ನರ್‌ಶಿಪ್‌ (ಎಂಎಂಪಿ) ಒಪ್ಪಂದದ ಅನ್ವಯ ಅವಧಿ ಮೀರಿ ವಾಸಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ಎಲ್ಲಾ ವ್ಯವಸ್ಥೆ ಮಾಡಲು ಸಿದ್ಧ ಎಂದು ಹೈಕಮಿಷನ್‌ ಪ್ರತಿಪಾದಿಸಿದೆ. 2020ರಲ್ಲಿ ಒಟ್ಟು 20,706 ಭಾರತೀಯರು ವೀಸಾ ಅವಧಿ ಮುಗಿದ ನಂತರವೂ ವಾಸವಾಗಿದ್ದರು.

ಬ್ರಾವರ್‌ಮನ್‌ ಹೇಳಿಕೆ ಏನು?:
ಬ್ರಿಟನ್‌ನ “ಸ್ಪೆಕ್ಟೇಟರ್‌’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ವೀಸಾ ಅವಧಿ ಮುಗಿದು ಯು.ಕೆ.ಯಲ್ಲಿ ವಾಸಿಸುತ್ತಿರುವವರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚು ಎಂದು ಸುಯೆಲ್ಲಾ ಬ್ರಾವರ್ಮನ್‌ ದೂರಿದ್ದರು. “ಬ್ರಿಟನ್‌ ಮತ್ತು ಭಾರತ ನಡುವೆ ನಡೆಯುತ್ತಿರುವ ವ್ಯಾಪಾರಿ ಒಪ್ಪಂದದಲ್ಲಿ ಭಾರತೀಯ ವಲಸಿಗರನ್ನು ಹೆಚ್ಚಿಸುವ ಅಂಶವನ್ನೂ ಸೇರಿಸಿಕೊಂಡಿರುವುದು ನಮ್ಮ ಸರ್ಕಾರದ ಗುರಿಗೆ ವಿರುದ್ಧವಾಗಿದೆ’ ಎಂದಿದ್ದರು.

ವಲಸಿಗರು ಕಾರಣ:
ಲೀಸ್ಟರ್‌ನಲ್ಲಿ ಪಾಕ್‌-ಭಾರತ ಕ್ರಿಕೆಟ್‌ ಪಂದ್ಯಾವಳಿಯಿಂದಾಗಿ ನಡೆದ ಗಲಭೆಯ ವಿಚಾರದಲ್ಲಿ ಮಾತನಾಡಿದ್ದ ಅವರು, “ಅನಿಯಂತ್ರಿತ ವಲಸೆ ಹಾಗೂ ಹೊಸದಾಗಿ ದೇಶಕ್ಕೆ ವಲಸೆ ಬಂದವರು ಸರಿಯಾಗಿ ಹೊಂದುಕೊಳ್ಳದೇ ಹೋಗಿದ್ದರಿಂದಲೇ ಈ ಗಲಭೆ ಉಂಟಾಗಿದೆ’ ಎಂದು ಸುಯೆಲ್ಲಾ ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next