ಯಾದಗಿರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗಾಗಿ ಮೀಸಲಿರುವ ಅನುದಾನವನ್ನು ಅವರ ಕಾಲೋನಿ ಅಥವಾ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರ ಬಳಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಾಗರಿಕ ಹಕ್ಕು ಜಾರಿ ಅಧಿನಿಯಮ ಪ್ರಕಾರ ಎಫ್.ಐ.ಆರ್ ದಾಖಲಿಸುವಂತೆ ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಹಾಯಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಉಪ ವಿಭಾಗ ಮಟ್ಟದ ಅನುಸೂಚಿತ ಜಾತಿ/ಅನುಸೂಚಿತ ಪಂಗಡ (ದೌರ್ಜನ್ಯ ನಿಯಂತ್ರಣ ನಿಯಮಗಳು) 1995ರ ನಿಯಮ 17ರನ್ವಯ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಮೂರು ತಾಲೂಕಿನಲ್ಲಿ ಒಂದೊಂದು ವಸತಿ ನಿಲಯವನ್ನು ಆಯ್ಕೆ ಮಾಡಿಕೊಂಡು ಮಾದರಿ ವಸತಿ ನಿಲಯ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ಕೊಟ್ಟು ನಿಲಯಗಳ ಆವರಣದಲ್ಲಿ ಹೆಚ್ಚಿನ ಸಸಿ-ಗಿಡಗಳನ್ನು ನೆಟ್ಟು ಹಸಿರು ವಸತಿ ನಿಲಯಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು. ಕೇವಲ ಪತ್ರ ವ್ಯವಹಾರ ಮಾಡದೇ ಸಮಿತಿಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ಬರುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಮಲ ಹೊರುವ ಪದ್ಧತಿ ಇರುವುದಿಲ್ಲವೆಂದು ಜಿಲ್ಲೆಯ ಸಂಬಂಧಪಟ್ಟ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ನಗರಸಭೆ ಆಯುಕ್ತರು ಸಭೆಯ ಗಮನಕ್ಕೆ ತಂದರು.
ಯಾದಗಿರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.