ಮೈಸೂರು: ರಾಜ್ಯದ ಸರಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಲ್ಲಿ ಕಾರ್ಯನಿರತರಾಗಿದ್ದರೆ, ಅಂಥವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ| ಕೆ. ಸುಧಾಕರ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಮೈಸೂರು ವಿಭಾಗೀಯ ಮಟ್ಟದ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಳಪಟ್ಟ ಅಧಿಕಾರಿಗಳ ಸಭೆ ನಡೆಸಿದ್ದು, ಈ ವೇಳೆ ಕೆಲವು ವೈದ್ಯರು ಕರ್ತವ್ಯದ ಅವಧಿಯಲ್ಲಿ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ನಿರ್ಧರಿಸಿದ್ದು, ಎಲ್ಲ ವೈದ್ಯರೂ ಪ್ರತಿದಿನ ಮೂರು ಬಾರಿ ಬಯೋಮೆಟ್ರಿಕ್ ಹಾಜರಿ ಹಾಕುವಂತೆ ಕಡ್ಡಾಯಗೊಳಿಸಲಾಗುವುದು.
ವೈದ್ಯರು ನಿಯಮಗಳನ್ನು ಉಲ್ಲಂಘಿಸದಂತೆ ಜಿಯೊ ಟ್ಯಾಗ್ ಅಳವಡಿಸುವ ಹಾಗೂ ಕಚೇರಿ ಅವಧಿ ಮುಗಿದ ಬಳಿಕ ಕಾಲೇಜಿನಲ್ಲಿಯೇ ಖಾಸಗಿಯಾಗಿ ಚಿಕಿತ್ಸೆ ನೀಡುವ ಅವಕಾಶವನ್ನು ವೈದ್ಯರಿಗೆ ನೀಡುವ ಚಿಂತನೆ ಸರಕಾರದ ಮುಂದಿದೆ ಎಂದು ತಿಳಿಸಿದರು.
ನ.8ರೊಳಗೆ ರಾಜ್ಯದ ಪಾಲಿಕೆ, ನಗರಸಭೆ ವ್ಯಾಪ್ತಿಯ ಕೊಳಗೇರಿಯಲ್ಲಿ 438 ನಮ್ಮ ಕ್ಲಿನಿಕ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ವಾರದಲ್ಲಿಯೇ ಚಾಲನೆ ನೀಡಲಾಗುತ್ತಿದೆ. ಹಾಗೆಯೇ ಮಹಿಳೆಯರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಸಲುವಾಗಿ 128 ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.