ವಿಧಾನಸಭೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳು ಭೂಮಿಯ ಒಳಗೆ ಯುಜಿ ಕೇಬಲ್ ಅಳವಡಿಕೆಗೆ ಅನಧಿಕೃತವಾಗಿ ರಸ್ತೆ ಅಗೆದಿದ್ದರೆ ಆ ಸಂಸ್ಥೆಯವರೇ ದುರಸ್ಥಿ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಬೈರತಿ ಸುರೇಶ್ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಬಿಬಿಎಂಪಿಗೆ ರಸ್ತೆ ಅಗೆತದ ಶುಲ್ಕ ಪಾವತಿಸಿದ್ದರೆ ಪಾಲಿಕೆ ವತಿಯಿಂದ ರಸ್ತೆ ದುರಸ್ತಿ ಮಾಡಲಾಗುವುದು. ಒಂದೊಮ್ಮೆ ಅಕ್ರಮವಾಗಿ ಅಗೆದಿದ್ದರೆ ಆಯಾ ಸಂಸ್ಥೆಗಳಿಂದ ವಸೂಲು ಮಾಡಲಾಗುವುದು ಎಂದು ತಿಳಿಸಿದರು.
ರಸ್ತೆಗಳು ಅಭಿವೃದ್ಧಿಯಾದ ನಂತರ ಅಗೆತದ ಪ್ರಕರಣ ನಿಲ್ಲಿಸಲು ಪಾಲಿಕೆ, ಜಲಮಂಡಳಿ, ಬೆಸ್ಕಾಂ ಸಮನ್ವಯತೆ ವ್ಯವಸ್ಥೆ ಜಾರಿಗೊಳಿಸಲಾಗುವುದು. ಅಲ್ಲಿಂದ ಒಪ್ಪಿಗೆ ದೊರೆತ ನಂತರವೇ ಯಾವುದೇ ಸಂಸ್ಥೆ ಕೇಬಲ್ ಅಳವಡಿಕೆ ಕೈಗೆತ್ತಿಕೊಳ್ಳುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಪರವಾನಗಿ ಇಲ್ಲದೆ ವ್ಯವಹಾರ ನಡೆಸುತ್ತಿದ್ದ ಫೈನಾನ್ಸ್ ; ನಗರಸಭೆಯಿಂದ ನೋಟಿಸ್
ಇದಕ್ಕೂ ಮುನ್ನ ಮಾತನಾಡಿದ ಬೈರತಿ ಸುರೇಶ, ಹೆಬ್ಟಾಳ ಕ್ಷೇತ್ರದ 8 ವಾರ್ಡ್‌ಗಳಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಯವರು ಅನುಮತಿಗೂ ಮೀರಿ ಕೇಭಳ ಅಳವಡಿಸಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಎರಡು ಸಂಸ್ಥೆಗೆ ತಲಾ 50 ಲಕ್ಷ ರೂ. ನಂತೆ 1 ಕೋಟಿ ರೂ. ದಂಡ ವಸೂಲು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದರು.