ಬಾಗಲಕೋಟೆ: ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್‌ದಿಂದ ಸದ್ಯ ಕೆಲವು ಸಡಿಲಿಕೆ ನೀಡಲಾಗಿದೆ. ಈ ಸಡಿಲಿಕೆ ದುರ್ಬಳಕೆ ಮಾಡಿಕೊಂಡರೆ ಮತ್ತೆ ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬೆಳಗಾವಿ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ಎಚ್ಚರಿಕೆ ನೀಡಿದರು.
ಜಿಲ್ಲಾ ಕೋವಿಡ್-19 ಆಸ್ಪತ್ರೆ ಆವರಣದಲ್ಲಿ ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿ ಹೊರಬಂದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸ್ವಾಗತಿಸಿ, ಕ್ವಾರಂಟೈನ್‌ಗೆ ಕಳುಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಧೋಳದ ನಾಲ್ವರು ಪೊಲೀಸ್ ಸಿಬ್ಬಂದಿಗೆ ಈ ಸೋಂಕು ತಗುಲಿದ್ದು, ಅದರಲ್ಲಿ ಮೂವರು ಗುಣಮುಖರಾಗಿದ್ದಾರೆ. ಇಂದು ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ. ಕೋವಿಡ್ 19 ಮುಕ್ತರಾಗಿ ಹೊರಬಂದ ಪೊಲೀಸ್ ಸಿಬ್ಬಂದಿಯನ್ನು ನೋಡಿ ಸಂತೋಷವಾಯಿತು. ಗುಣಮುಖರಾಗುವ ಜತೆಗೆ ಫಿಟ್‌ನೆಸ್ ಜತೆಗೆ ಹೊರ ಬಂದಿದ್ದಾರೆ ಎಂದರು.
ಸಿಬ್ಬಂದಿಗೆ ಸೋಂಕು ತಗುಲಿದಾಗ ಆಸ್ಪತ್ರೆಗೆ ಹೊರಟಿದ್ದ ಅವರ ಮುಖದಲ್ಲಿ ಭಾವನಾತ್ಮಕವಾಗಿ ದುಃಖಪಟ್ಟಿದ್ದರು. ಅವರಿಗೂ ಪತ್ನಿ, ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ಎಂಬ ಭಾವುಕತೆಯಲ್ಲಿದ್ದರು. ಬಾಗಲಕೋಟೆಯ ಕೋವಿಡ್ ಆಸ್ಪತ್ರೆಯ ಸಿಬ್ಬಂದಿವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದು, ಅವರೆಲ್ಲ ಬೇಗ ಗುಣಮುಖರಾಗಿ ಹೊರಬಂದಿದ್ದಾರೆ ಎಂದು ಹೇಳಿದರು.
ನಾವು ಜನಸೇವೆ ಮಾಡಲು ಯಾವಾಗಲೂ ಫಿಟ್‌ನೆಸ್ ಜತೆಗೆ ಹುಮ್ಮಸ್ಸಿನೊಂದಿಗೆ ಇರುತ್ತೇವೆ. ನಾವು ಶ್ರದ್ದೆಯಿಂದ ಕೆಲಸ ಮಾಡುತ್ತೇವೆ. ಜನರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರನ್ನು ನೋಡಿಕೊಳ್ಳಬೇಕಾದ ಪೊಲೀಸರಿಗೆ, ಇಂತಹ ಸ್ಥಿತಿ ಬರುವುದಿಲ್ಲ. ಲಾಕ್‌ಡೌನ್ ಈವರೆಗೆ ಕಠಿಣವಾಗಿತ್ತು. ಸದ್ಯ ಸಡಿಲಿಕೆಯಾಗಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿಯೇ ಹೊರ ಬರಬೇಕು. ಇದನ್ನು ಉಲ್ಲಂಘಿಸಿದರೆ, ಲಾಕ್‌ಡೌನ್ ಮತ್ತೆ ಕಠಿಣವಾಗುತ್ತದೆ. ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಕೈ ತೊಳೆದುಕೊಳ್ಳಬೇಕು ಎಂದು ತಿಳಿಸಿದರು.
ಸಿಬ್ಬಂದಿ ಕುರಿತು ಎಚ್ಚರಿಕೆ: ಕೋವಿಡ್ 19 ನಿಯಂತ್ರಣಕ್ಕಾಗಿ ವಾರಿಯರ್ಸ್ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ಆರೋಗ್ಯದ ಕುರಿತು ಎಚ್ಚರಿಕೆ ವಹಿಸಲಾಗಿದೆ. ಪ್ರತಿಯೊಬ್ಬರಿಗೂ ಮಾಸ್ಕ್ ನೀಡಿದ್ದು, ಎಲ್ಲ ಠಾಣೆ, ವಸತಿಗೃಹಗಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಅಲ್ಲದೇ ರೆಗ್ಯೂಲರ್ ಕೆಲಸ ಕಡಿಮೆ ಮಾಡಿದ್ದು, ಲಾಕ್ ಡೌನ್ ವೇಳೆ ಜನರ ಸುರಕ್ಷತೆ ಕುರಿತು ಹೆಚ್ಚು ಕಾಳಜಿ ವಹಿಸುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ ಕಂಟೈನ್‌ಮೆಂಟ್ ಝೋನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವ ಊಟದ ವ್ಯವಸ್ಥೆ ಮಾಡಿದ್ದು, ಕೆಲವು ದಿನ ಮನೆಯಿಂದ ಬಂದು ಕೆಲಸ ನಿರ್ವಹಿಸದೇ ಪ್ರತ್ಯೇಕವಾಗಿ ವಾಸಿಸಲು ಸೂಚಿಸಲಾಗಿದೆ ಎಂದು ಐಜಿಪಿ ರಾಘವೇಂದ್ರ ಸುಹಾಸ್ ಹೇಳಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ ಇದ್ದರು.