ಕಾರವಾರ: ಪಂಡಿತ ದೀನ ದಯಾಳ್ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಹಾಗೂ ಸೌಭಾಗ್ಯ ಯೋಜನೆ ಫಲಾನುಭವಿಗಳ ಅಂಕಿ-ಅಂಶಗಳ ನಿಖರ ಮಾಹಿತಿ ನೀಡಬೇಕೆಂದು ಸಂಸದ ಅನಂತಕುಮಾರ ಹೆಗಡೆ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದೀಶಾ ಸಮಿತಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೀನ ದಯಾಳ್ ಗ್ರಾಮೀಣ ವಿದ್ಯುದ್ದೀಕರಣ ಹಾಗೂ ಸೌಭಾಗ್ಯ ಯೋಜನೆ ಫಲಾನುಭವಿಗಳ ಅಂಕಿ-ಅಂಶದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸದೇ ನಿಜವಾದ ಅಂಕಿ-ಅಂಶಗಳ ಮಾಹಿತಿ ನೀಡಬೇಕು. ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಪ್ರಧಾನಮಂತ್ರಿ ಯೋಜನೆ ಪ್ರಗತಿ ವರದಿ ಪರಿಶೀಲಿಸಿದ ಸಂಸದರು ನೆರೆ ಸಂತ್ರಸ್ತರಿಗೆ ಈ ಯೋಜನೆಯಡಿ ಮನೆ ಕಟ್ಟಿಸಿಕೊಡಲು ಸಮಸ್ಯೆಯಾಗುವುದರಿಂದ ಪರ್ಯಾಯವಾಗಿ ಮನೆ ಕಟ್ಟಿಸಿಕೊಡುವ ಕಾರ್ಯವಾಗಬೇಕೆಂದರು. ಹಿಂದಿನ ಸಭೆಯಲ್ಲಿ ಫಲಾನುಭವಿಗಳಿಗೆ ಮನೆ ಕಟ್ಟಿ ಕೊಡಲು ಜಾಗೆಯನ್ನು ಗುರುತಿಸುವುದಕ್ಕೆ ಸಂಬಂಧಿಸಿದಂತೆ ಸಂಸದರು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ಕುಮಟಾ, ಹೊನ್ನಾವರ, ಭಟ್ಕಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ಸರಕಾರಿ ಜಮೀನು ಲಭ್ಯ ಇಲ್ಲದೇ ಇರುವುದರಿಂದ ಖಾಸಗಿ ಜಮೀನಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿರುತ್ತದೆ. ಸರಕಾರದ ಮಾರ್ಗಸೂಚಿ ದರದಲ್ಲಿ ಖಾಸಗಿ ಜಮೀನಿನ ಮಾಲೀಕರು ಜಮೀನನ್ನು ಮುಂದೆ ನೀಡಲು ಬಂದಿರುವುದಿಲ್ಲ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲಿಸಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುವ ಮಂಗನಕಾಯಿಲೆ ಸಂಬಂಧ ಪಟ್ಟಂತೆ ಗ್ರಾಮ ಪಂಚಾಯತಿಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಅವರು ಸೂಚಿಸಿದರು. ನರೇಗಾ ಯೋಜನೆ ಪ್ರಗತಿಯನ್ನು ಪರಿಶೀಲಿಸಿದ ಸಂಸದರು, ಜಿಲ್ಲೆಯಲ್ಲಿ ಈ ಯೋಜನೆಯು ಇನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾಗಿದೆ ಎಂದರು. ನರೇಗಾ ಯೋಜನೆಯಡಿ 2019-20ನೇ ಸಾಲಿಗೆ ಅನುದಾನ ಬಿಡುಗಡೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕೂಲಿ ಪಾವತಿಗಾಗಿ ಸಾಕಷ್ಟು ಅನುದಾನ ಲಭ್ಯವಿರುವ ಕಾರಣ ಕೂಲಿಯನ್ನು ಪಾವತಿ ಮಾಡಲಾಗಿರುತ್ತದೆ ಎಂದು ಜಿ.ಪಂ. ಸಿಇಒ ಎಂ. ರೋಷನ್ ಅವರು ಸಂಸದರ ಗಮನಕ್ಕೆ ತಂದರು.
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಹೆಸ್ಕಾಂ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಉಂಟಾಗುತ್ತಿದ್ದು, ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಮತ್ತು ವಿದ್ಯುತ್ ಕಾಮಗಾರಿಗಳನ್ನು ಮಧ್ಯಾಹ್ನದವರೆಗೂ ಮಾಡಿ ರಾತ್ರಿ ವಿದ್ಯುತ್ ಪೂರೈಸುವ ಕಾರ್ಯವನ್ನು ಕೈಗೊಳ್ಳಬೇಕೆಂದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಇದ್ದರು.