Advertisement

ಹೈದರ್‌ಖಾನ್‌ ಬಾವಿಯ ಸಂರಕ್ಷಣೆಗೆ ಕ್ರಮ

03:44 PM Oct 14, 2018 | Team Udayavani |

ಬೀಳಗಿ: ತಾಲೂಕಿನ ಬಾಡಗಂಡಿ ಗ್ರಾಮದ ಐತಿಹಾಸಿಕ ಹೈದರ್‌ಖಾನ್‌ ಬಾವಿಯ (ಹಿರೇಬಾವಿ) ಹೂಳು ತೆಗೆಯಲು ಹಾಗೂ ಬಾವಿಯ ಸುತ್ತಲಿನ ಪ್ರದೇಶ ಶುಚಿಗೊಳಿಸುವ ಕಾರ್ಯಕ್ಕೆ ಬಾಡಗಂಡಿ ಗ್ರಾಮ ಪಂಚಾಯತ ಮುಂದಾಗಿದೆ. ಸಾರ್ವಜನಿಕರ, ಜನಪ್ರತಿನಿಧಿಗಳ ಹಾಗೂ ಅಧಿ ಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೊಳಗಾಗಿ ಬಾವಿಯ ಒಡಲಲ್ಲಿ ಹೂಳು ಹಾಗೂ ಬಾವಿಯ ಸುತ್ತಲಿನ ಪ್ರದೇಶ ಮುಳ್ಳುಕಂಟಿ ಮತ್ತು ಹೊಲಸಿನಿಂದ ಆವರಿಸಿ ಐತಿಹಾಸಿಕ ಬಾವಿ ಅಳವಿನಂಚಿಗೆ ಬಂದು ನಿಂತಿತ್ತು. ಈ ಕುರಿತು ಸೆಪ್ಟೆಂಬರ್‌ 9 ರಂದು ಅಳಿವಿನಂಚಿನಲ್ಲಿ ಹೈದರ್‌ ಖಾನ್‌ ಬಾವಿ ಶೀರ್ಷಿಕೆಯಡಿ ಉದಯವಾಣಿ ವರದಿ ಮಾಡಿತ್ತು.

Advertisement

ವರದಿಗೆ ತಕ್ಷಣವೇ ಸ್ಪಂದಿಸಿರುವ ಗ್ರಾಪಂ ಪಿಡಿಒ ಎಂ.ಎಸ್‌.ನಾಲತವಾಡ ಅವರು ಹಲವಾರು ವರ್ಷಗಳಿಂದ ಬಾವಿಯ ಒಡಲಲ್ಲಿ ತುಂಬಿಕೊಂಡಿರುವ ಹೂಳು ತೆಗೆಯುವ ಕ್ರಮಕ್ಕೆ ಮುಂದಾಗಿದ್ದಾರೆ. ಬಾವಿಯ ಸುತ್ತ ತುಂಬಿಕೊಂಡಿದ್ದ ಮುಳ್ಳುಕಂಟಿ ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಸುಮಾರು 10 ಸಾವಿರ ಚದರಡಿ ವಿಶಾಲ ಜಾಗದಲ್ಲಿ ವಿಸ್ತರಿಸಿಕೊಂಡಿರುವ 16ನೇ ಶತಮಾನದ ಹೈದರ್‌ಖಾನ್‌ ಬಾವಿಗೆ ವಿಶಿಷ್ಟ ಇತಿಹಾಸವಿದೆ. ಬಾವಿಯ ಸ್ವಚ್ಛತಾ ಸಂದರ್ಭ ಬಾವಿಯ ಎರಡನೇ ಕಮಾನ್‌ನಲ್ಲಿ ದೇವ ನಾಗರ, ಉರ್ದು ಹಾಗೂ ಹಳೆಗನ್ನಡ ಲಿಪಿಗಳು ಕೂಡ ಲಭ್ಯವಾಗಿವೆ. ಇಲ್ಲಿರುವ ಲಿಪಿಗಳ ಅಧ್ಯಯನ ನಡೆಸುವುದು ಅಗತ್ಯವಾಗಿದೆ. ಆ ಮೂಲಕ ಬಾವಿಯ ಐತಿಹಾಸಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಅನುಕೂಲವಾಗಲಿದೆ. ಇಂಥ ಐತಿಹಾಸಿಕ ಬಾವಿಯ ನಿರ್ಲಕ್ಷ್ಯದಿಂದ ಅಮೂಲ್ಯ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗಿತ್ತು. ಬಾಡಗಂಡಿಯವರಾದ ಮಾಜಿ ಸಚಿವ ಮತ್ತು ಹಾಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲರ ಇಚ್ಚಾಶಕ್ತಿಯೂ ಕೂಡ ಐತಿಹಾಸಿಕ ಬಾವಿ ಮರುಜೀವ ಪಡೆಯಲು ಕಾರಣವಾಗಿದೆ.

ಎಸ್‌.ಆರ್‌.ಪಾಟೀಲ ಭೇಟಿ: ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಬಾವಿಗೆ ಬೇಟಿ ನೀಡಿ ಗ್ರಾಪಂ ಅಧಿಕಾರಿಗಳು ಕೈಗೊಂಡ ಸ್ವಚ್ಛತಾ ಕಾರ್ಯ ವೀಕ್ಷಿಸಿದರು. ಬಾವಿಯ ಸ್ವಚ್ಛತೆಗೆ ತೀವ್ರ ಆಸಕ್ತಿ ವಹಿಸಿರುವ ಗ್ರಾಪಂ ಪಿಡಿಒ ನಾಲತವಾಡರ ಕಾರ್ಯ ದಕ್ಷತೆಯನ್ನು ಶ್ಲಾಘಿಸಿದರು. ಐತಿಹಾಸಿಕ ಪರಂಪರೆ ಹೊಂದಿದ ಬಾವಿ ಪುನರುಜ್ಜೀವನಗೊಳಿಸುವ ಕಾರ್ಯ ಪ್ರಶಂಸನೀಯ. ಐತಿಹಾಸಿಕ ಕುರುಹುಗಳು ನಶಿಸಿ ಹೋದರೆ ಮುಂದಿನ ಪೀಳಿಗೆಯ ಶಾಪಕ್ಕೆ ಗುರಿಯಾಗುತ್ತೇವೆ. ಐತಿಹಾಸಿಕ ಪರಂಪರೆ ಉಳಿಸಿ- ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next