Advertisement

ನಾರಾಯಣ ಗುರು ಅಧ್ಯಯನ ಪೀಠಕ್ಕೆ ಕ್ರಮ

10:58 AM Aug 28, 2018 | |

ಕಲಬುರಗಿ: ಜಾತಿ ವ್ಯವಸ್ಥೆ ವಿರುದ್ಧ ಅಪ್ರತಿಮ ಹೋರಾಟದ ಮೂಲಕ ಅಸ್ಪೃಶ್ಯ ಜಾತಿಗಳು ಸ್ವಾಭಿಮಾನದ ಜೀವನ ನಡೆಸುವಂತೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಾಧನೆ ಹಾಗೂ ಸಾಮಾಜಿಕ ಕ್ರಾಂತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಲು ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗ ಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಂಯಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಾಣ ಗುರುಗಳ 164ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 18ನೇ ಶತಮಾನದಲ್ಲಿ ಹಲವು ಸಾಮಾಜಿಕ ಕ್ರಾಂತಿಗಳು ನಡೆದವು. ಆದರೆ, ಇವುಗಳಲ್ಲಿ ನಾರಾಯಾಣ ಗುರುಗಳು ನಡೆಸಿದ ಜಾತಿ ತಾರತಮ್ಯದ ವಿರುದ್ಧದ ಕ್ರಾಂತಿ ಪ್ರಮುಖವಾದುದು ಎಂದು ಹೇಳಿದರು.

ಅಂದಿನ ಕಾಲದಲ್ಲಿ ಕೇರಳದಲ್ಲಿ ಅಸ್ಪೃಶ್ಯ ಜಾತಿ ಜನರನ್ನು ಅದರಲ್ಲೂ ಮಹಿಳೆಯರನ್ನು ಅತ್ಯಂತ ಕೀಳುಮಟ್ಟದಲ್ಲಿ ನಡೆಸಿಕೊಂಡು ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿತ್ತು. ಒಮ್ಮೆ ಕೇರಳ ರಾಜ್ಯದಲ್ಲಿ ಪ್ರವಾಸ ಮಾಡಿದ್ದ ಸ್ವಾಮಿ
ವಿವೇಕಾನಂದರು “ಕೇರಳ ಒಂದು ಹುಚ್ಚಾಸ್ಪತ್ರೆ’ಯಂತಾಗಿದೆ ಎಂದಿದ್ದರು. 

ಅಸ್ಪೃಶ್ಯರಿಗೆ ದೇವಾಲಯ ಪ್ರವೇಶಕ್ಕೆ ನಿಷಿದ್ಧವಿತ್ತು. ಶಿಕ್ಷಣದಿಂದ ವಂಚಿಸಲಾಗುತ್ತಿತ್ತು. ಮೇಲ್ಜಾತಿ ಪ್ರದೇಶಗಳಲ್ಲಿ ಅವರನ್ನು ನಡೆದುಕೊಂಡು ಹೋಗಲು ಅನುಮತಿ ನೀಡುತ್ತಿರಲಿಲ್ಲ. ಈ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ನಾರಾಯಣ ಗುರುಗಳು ಅಸ್ಪೃಶ್ಯರಿಗಾಗಿಯೇ ಶಿವ ದೇವಾಲಯ ಕಟ್ಟಿಸಿದರು. ಕೇವಲ ದೇವಾಲಯ ನಿರ್ಮಿಸಿ ಪ್ರವೇಶಿಸಿದರೆ ಸಾಲದು ಅಸ್ಪೃಶ್ಯರಿಗೆ ಶಿಕ್ಷಣ ಬೇಕು. ಶಿಕ್ಷಣ ಪಡೆದು ಸಾಮಾಜಿಕ ಅಸಮತೋಲನ ತೊಡೆದು ಹಾಕಬೇಕು ಎಂದು ತಮ್ಮ ಅನುಯಾಯಿಗಳನ್ನು ನಾರಾಯಣ ಗುರುಗಳು ಒತ್ತಾಯಿಸುತ್ತಿದ್ದರು. ಒಂದೇ ಜಾತಿ ಒಂದೇ ಧರ್ಮ ಹಾಗೂ ಒಂದೇ ದೇವರು ಎನ್ನುವುದು ನಾರಾಯಣ ಗುರುಗಳ ಮಾತಿನ ತಿರುಳಾಗಿತ್ತು ಎಂದು ಹೇಳಿದರು.

1925ರಲ್ಲಿ ಮಹಾತ್ಮಾ ಗಾಂಧಿ ಅವರು ನಾರಾಯಣ ಗುರುಗಳನ್ನು ಭೇಟಿಯಾಗಿದ್ದಾಗ ಅವರ ಮಾತುಗಳನ್ನು ಕೇಳಿ ಗುಜರಾತಗೆ ತೆರಳಿದ ಮೇಲೆ ತಮ್ಮ “ನವಜೀವನ’ ಪ್ರತಿಕೆಯನ್ನು “ಹರಿಜನ’ ಎಂದು ಬದಲಾಯಿಸಿದರು. ಜಾತಿ ಪದ್ಧತಿ ವಿರುದ್ಧ ವೈಚಾರಿಕ ಕ್ರಾಂತಿ ಮಾಡಿದ ಮಹಾನ್‌ ಪುರುಷ ನಾರಾಯಣ ಗುರುಗಳ ಕುರಿತು ಯವ ಜನರಿಗೆ
ತಿಳಿಸುವ ಮಹತ್ತರ ಹೊಣೆ ನಮ್ಮ ಮೇಲಿದೆ. ಹೀಗಾಗಿ ನಾರಾಯಣ ಗುರು ಅಧ್ಯಯನ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

Advertisement

ಇದೇ ವೇಳೆ ಈಡಿಗ ಸಮಾಜದ ಮುಖಂಡರ ಬೇಡಿಕೆಗೆ ಸ್ಪಂದಿಸಿದ ಸಚಿವರು, ನಾರಾಯಣ ಗುರುಗಳ ನಿಗಮ ಮಂಡಳಿ ಸ್ಥಾಪನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಮತ್ತು ಕಲಬುರಗಿಯಲ್ಲಿ ನಾರಾಯಣ ಗುರುಗಳ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕಾರವಾರ ಮತ್ತು ಮಂಗಳೂರಿನಲ್ಲಿ ನೀರಾ ಇಳಿಸಲು ಅವಕಾಶ ನೀಡಲಾಗಿದ್ದು, ಅದೇ ರೀತಿ ಈ ಭಾಗದಲ್ಲಿ ಸಮುದಾಯದ ಕುಲ ಕಸುಬಾದ ನೀರಾ ಇಳಿಸಲು ಅವಕಾಶ ನೀಡಬೇಕು ಎಂಬುದು ಸಮಾಜದ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಈ ಬಗ್ಗೆಯೂ ಪರಿಶೀಲಸಲಾಗುವುದು ಎಂದು ಭರವಸೆ ನೀಡಿದರು.

ಆಳಂದ ಶಾಸಕ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗುತ್ತೇದಾರ ಮಾತನಾಡಿ. ಸೇಂದಿ ಮತ್ತು ಸಾರಾಯಿ ಮಾರಾಟ ರಾಜ್ಯದಲ್ಲಿ ನಿಷೇಧವಾಗಿರುವುದರಿಂದ ಕುಲ ಕಸುಬನ್ನೇ ನೆಚ್ಚಿ ಕೊಂಡ ಸಮುದಾಯದ ಜನ ಉದ್ಯೋಗವಿಲ್ಲದೆ ನಿರ್ಗತಿಕರಾಗಿದ್ದಾರೆ. ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆಯಿರುವ ಈ ಸಮುದಾಯದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಹಾಗೂ ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿದರು. ಸಮಾರಂಭದಲ್ಲಿ ಹಣಮಂತ ಗುತ್ತೇದಾರ ನಾರಾಯಣ ಗುರುಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
 
ಜಿಪಂ ಅಧ್ಯಕ್ಷೆ ಸುವರ್ಣಾ ಎಚ್‌. ಮಾಲಾಜಿ, ನಾರಾಯಾಣ ಗುರುಗಳ ಜಯಂತ್ಯೋತ್ಸವದ ಸಮಿತಿ ಜಿಲ್ಲಾಧ್ಯಕ್ಷ ರಮೇಶ ಗುತ್ತೇದಾರ, ಮೇಯರ್‌ ಶರಣಕುಮಾರ ಮೋದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಜಿಪಂ ಸದಸ್ಯರಾದ ರಾಜೇಶ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ಮಾಜಿ ಸದಸ್ಯ ನಿತಿನ ಗುತ್ತೇದಾರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಮಂಗಳೂರಿನ ಸದಾನಂದ ಪೆರ್ಲಾ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next