ಹೊನ್ನಾಳಿ: ಹಿರೇಕಲ್ಮಮಠದ ಶ್ರೀ ಚನ್ನಪ್ಪಸ್ವಾಮಿ ವಿದ್ಯಾ ಸಂಸ್ಥೆ ವತಿಯಿಂದ ಕೃಷಿ ಕಾಲೇಜು ಆರಂಭಿಸಬೇಕೆಂಬುದು ಶ್ರೀಗಳ ಆಸೆಯಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳ ಬಳಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಸರ್ಕಾರದಿಂದ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯಕ್ಕೆ ಈ ಬಗ್ಗೆ ಮಾಹಿತಿ ಕಳುಹಿಸಿಕೊಟ್ಟಿದ್ದು ಕೆಲ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದ್ದು ಆದಷ್ಟು ಬೇಗ ಕೃಷಿ ಕಾಲೇಜು ಮಂಜೂರು ಮಾಡಿಸುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಭರವಸೆ ನೀಡಿದರು.
ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಮಹಾಸ್ವಾಮಿಗಳ 51ನೇ ವಾರ್ಷಿಕ ಪುಣ್ಯರಾಧನೆ ಹಾಗೂ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ 6ನೇ ಪುಣ್ಯಸ್ಮರಣೆ ನಿಮಿತ್ತ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ನವೋದ್ಯಮ ಕಾರ್ಯಾಗಾರ, 2021 ದತ್ತಿ ಉಪನ್ಯಾಸ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಈಗಾಗಲೇ ಹಿರೇಕಲ್ಮಠದ ಅಭಿವೃದ್ಧಿಗೆ ಒಂದು ಕೋಟಿ ಹಣ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲಿ ಮತ್ತಷ್ಟು ಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಿಗೆ ರೂ.2.70 ಲಕ್ಷ ಮಂಜೂರು ಮಾಡಿದ್ದಾರೆ. ಇದೊಂದು ದೊಡ್ಡ ಮೊತ್ತ ಎಂದ ಅವರು, ಹೊಟ್ಯಾಪುರ ಮಠ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದಾರೆ ಎಂದರು.
ಕಳೆದ ವರ್ಷ ಐತಿಹಾಸಿಕ ಕೃಷಿ ಮೇಳವನ್ನು ಹೊನ್ನಾಳಿಯಲ್ಲಿ ಮಾಡಿದ್ದು ಪಂಚರಾಜ್ಯಗಳ ಕೃಷಿ ಮೇಳವನ್ನು ಮಾಡಬೇಕೆಂದು ಗುರುಗಳ ಅಪೇಕ್ಷೆ ಇದೆ. ಕೊರೊನಾದಿಂದಾಗಿ ಈ ಬಾರಿ ಕೃಷಿ ಮೇಳ ಮಾಡುವುದು ಬೇಡ ಎಂದು ಮುಖ್ಯಮಂತ್ರಿಗಳು ಹೇಳಿದ್ದು, ಮುಂದಿನ ವರ್ಷ ಕೋವಿಡ್‌ನಿಂದ ಮುಕ್ತರಾಗಿ ಕೃಷಿ ಮೇಳದ ಅತ್ಯಂತ ದೊಡ್ಡ ಕಾರ್ಯಕ್ರಮ ಮಾಡಬೇಕಾಗಿದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಶ್ರೀ ಮಠವು ಜ್ಞಾನ ದಾಸೋಹದ ಜತೆಗೆ ಕಲೆ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಾ ಬರುತ್ತಿದೆ ಎಂದರು. ಪ್ರತಿವರ್ಷ ಮಠದಲ್ಲಿ ಸರಳ ವಿವಾಹ ಕಾರ್ಯಕ್ರಮ ಮಠದಲ್ಲಿ ಮಾಡುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿವರ್ಷ ಮಠದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದರು. ಕೊರೊನಾ ಇರುವ ಕಾರಣ ಹೆಚ್ಚು ಜನ ಸೇರ ಬಾರದೆಂದು ಸರ್ಕಾರದ ಸುತ್ತೋಲೆ ಇರುವುದರಿಂದ ಸರಳವಾಗಿ ಕಾರ್ಯಕ್ರಮವನ್ನ ಮಠದಿಂದ ಮಾಡಲಾಗುತ್ತಿದೆ ಎಂದ ಸಂಸದರು, ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಂಡು ಕೊರೊನಾದಿಂದ ದೂರವಿರಬೇಕು ಎಂದರು.
ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ರಾಂಪುರ ಮಠದ ಶಿವಕುಮಾರ ಹಾಲಸ್ವಾಮಿಗಳು, ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿಗೆ ಭಾಜನರಾದ ಎ.ಎಂ.ಹಾಲಪ್ಪಯ್ಯಶಾಸ್ತ್ರಿ, ಪಿಕಾರ್ಡ್ ಮಾಜಿ ಅಧ್ಯಕ್ಷ ಎಚ್.ಎಂ.ಗಂಗಾಧರಯ್ಯ ಮಾತನಾಡಿದರು. ಹವಳದ ಲಿಂಗರಾಜ್ ಇತರರು ಉಪಸ್ಥಿತರಿದ್ದರು