Advertisement

ಜನಸ್ನೇಹಿ ಚುನಾವಣೆಗೆ ಕ್ರಮ: ಪ್ರಾ. ಆಯುಕ್ತ ಶಿವಯೋಗಿ

10:27 AM Mar 09, 2018 | Team Udayavani |

ಮಂಗಳೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹೆಚ್ಚು ಆಸಕ್ತಿಯಿಂದ ಭಾಗವಹಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚುನಾವಣಾ ಸಿದ್ಧತೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಬಂದ ಅರ್ಜಿಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು. ಅರ್ಜಿಗಳನ್ನು ತಿರಸ್ಕರಿಸುವ ಸಂದರ್ಭ ಬಂದರೆ ಆ ಬಗ್ಗೆಯೂ ಹೆಚ್ಚು ಜಾಗರೂಕರಾಗಿರಬೇಕು ಎಂದರು.

ಈಗಾಗಲೇ ಅಂತಿಮ ಮತದಾರರ ಪಟ್ಟಿ ಫೆ. 28ರಂದು ಪ್ರಕಟವಾಗಿದೆ. ಅದರಲ್ಲಿ ಅರ್ಹರ ಹೆಸರು ಬಿಟ್ಟು ಹೋಗಿದ್ದಲ್ಲಿ ಈಗಲೂ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅಂಗವಿಕಲರು ಹಾಗೂ 80-90 ಪ್ರಾಯ ಮೀರಿದ ಹಿರಿಯ ನಾಗರಿಕರು ಮತದಾನದಲ್ಲಿ ಪಾಲ್ಗೊಳ್ಳಲು ಗಮನಹರಿಸಬೇಕು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದರು.

ಜಿಲ್ಲಾಧಿಕಾರಿ ಡಾ| ಶಶಿಕಾಂತ್‌ ಸೆಂಥಿಲ್‌ ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ತಿರಸ್ಕೃತಗೊಂಡಿರುವ ಸೇರ್ಪಡೆ ಅರ್ಜಿಗಳನ್ನು ಮತ್ತೂಮ್ಮೆ ಪರಿಶೀಲಿಸಿ, ಅರ್ಹರಿದ್ದರೆ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ಸಮಿತಿ ಮತ್ತು ತಂಡಗಳನ್ನು ರಚಿಸಲಾಗಿದ್ದು, ಚುನಾವಣೆ ಘೋಷಣೆಯಾದ ತತ್‌ಕ್ಷಣವೇ ಕಾರ್ಯಪ್ರವೃತ್ತವಾಗಲಿವೆ ಎಂದರು.

ಚುನಾವಣೆ ಸಂದರ್ಭದಲ್ಲಿ ಗಡಿಭಾಗದ ರಾಜ್ಯಗಳ ಕುರಿತಂತೆ ಕೈಗೊಳ್ಳಬೇಕಾದ ಭದ್ರತೆ ಮತ್ತಿತರ ಕ್ರಮಗಳ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

ಜಾಗೃತಿ ಕಾರ್ಯಕ್ರಮ
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಎಂ.ಆರ್‌. ರವಿ ಮಾತನಾಡಿ, ಮತದಾರರಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಕಾಲೇಜುಗಳಲ್ಲೂ ರಾಯಭಾರಿಗಳ ನೇಮಕಾತಿ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಬೂತ್‌ನಲ್ಲಿರುವ ಅಂಗವಿಕಲರ ಮಾಹಿತಿ ಪಡೆಯಲಾಗುತ್ತಿದ್ದು, ಅವರು ಮತದಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಬಿ.ಆರ್‌. ರವಿಕಾಂತೇಗೌಡ ಮಾತನಾಡಿ, ಜಿಲ್ಲೆಯಲ್ಲಿ 64 ಬೂತ್‌ಗಳು ನಕ್ಸಲ್‌ ಬಾಧಿತ ಪ್ರದೇಶದಲ್ಲಿ ಬರುತ್ತವೆ. ಇಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಮುಂಬರುವ ಚುನಾವಣೆ ಸುಗಮವಾಗಿ ನಡೆಯಲು ಸುಬ್ರಹ್ಮಣ್ಯ ಕೇಂದ್ರೀಕರಿಸಿ ನಕ್ಸಲ್‌ ಪೊಲೀಸ್‌ ಕ್ಯಾಂಪ್‌ ಕಾರ್ಯಾಚರಿಸಲಿದೆ ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಎಡಿಸಿ ಕುಮಾರ್‌, ವಿವಿಧ ಚುನಾವಣಾ ಸಮಿತಿಗಳ ನೋಡಲ್‌ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಸ್ವೀಪ್‌ ಸಮಿತಿಯು ಹೊರತಂದಿರುವ ಬ್ಯಾನರ್‌ ಹಾಗೂ ಸ್ಟಿಕ್ಕರ್‌ಗಳನ್ನು ಶಿವಯೋಗಿ ಸಿ. ಕಳಸದ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next