Advertisement

ಸ್ಮಶಾನಗಳಿಗೆ ಭೂಮಿ ಮಂಜೂರಿಗೆ ಕ್ರಮ

09:21 PM Mar 06, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯಲ್ಲಿ ಅಗತ್ಯವಿರುವ ಸ್ಮಶಾನಗಳಿಗೆ ಭೂಮಿ ಮಂಜೂರು ಮಾಡಲು ಹಾಗೂ ಈಗಾಗಲೇ ಇರುವ ಸ್ಮಶಾನಗಳ ಅಭಿವೃದ್ಧಿ ಸಂಬಂಧ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆ.ಡಿ.ಪಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

Advertisement

ಸ್ಮಶಾನಕ್ಕಾಗಿ ಭೂಮಿ ಇಲ್ಲ: ಜಿಲ್ಲೆಯ ಬಹುತೇಕ ಕಡೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸ್ಮಶಾನಕ್ಕಾಗಿ ಭೂಮಿ ಇಲ್ಲ. ಕೆಲವೆಡೆ ಇದ್ದರೂ ಭೂಮಿ ಹಸ್ತಾಂತರ ಅಭಿವೃದ್ಧಿಯಾಗದಿರುವುದರಿಂದ ತೊಂದರೆಯಾಗಿದೆ. ಈ ಸಮಸ್ಯೆ ವ್ಯಾಪಕವಾಗಿ ಇದೆ. ಇದರ ಪರಿಹಾರವಾಗಬೇಕು ಎಂದು ಸಭೆಯಲ್ಲಿ ಹಾಜರಿದ್ದ ಮುಖಂಡರು ಮನವಿ ಮಾಡಿದರು.

ತಕ್ಷಣವೇ ಕ್ರಮ ಕೈಗೊಳ್ಳಲು ಸೂಚನೆ: ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ರವಿ, ಜಿಲ್ಲೆಯಲ್ಲಿರುವ ಎಲ್ಲಾ ಸ್ಮಶಾನಗಳ ಸಂಖ್ಯೆಯನ್ನು ಪಟ್ಟಿ ಮಾಡಲಾಗುತ್ತಿದೆ. ಯಾವ ಗ್ರಾಮಗಳಿಗೆ ಸ್ಮಶಾನ ಲಭ್ಯವಿಲ್ಲ. ಯಾವ ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿಯಾಗಬೇಕಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದು ಅವಶ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಈಗಾಗಲೇ ಲಭ್ಯವಿರುವ ಸ್ಮಶಾನ ಭೂಮಿಯಲ್ಲಿ ಹಸ್ತಾಂತರ ಇನ್ನಿತರ ಪ್ರಕ್ರಿಯೆ ಕೈಗೊಳ್ಳಬೇಕಿದ್ದಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದು ತಿಳಿಸಿದರು.

ಜಾಗ ಮಂಜೂರು ಮಾಡಲು ವಿಳಂಬ ಬೇಡ: ಸರ್ಕಾರಿ ಜಾಗ ಇಲ್ಲದಿದ್ದಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಿ, ಸ್ಮಶಾನಕ್ಕೆ ಭೂಮಿ ಒದಗಿಸಬೇಕು. ಯಾವುದೇ ಕಾರಣಕ್ಕೂ ಸ್ಮಶಾನ ಜಾಗ ಮಂಜೂರು ಮಾಡಲು ವಿಳಂಬ ಮಾಡಬಾರದು ಎಂದು ಸ್ಥಳದಲ್ಲಿಯೆ ಇದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸೌಲಭ್ಯ ಕಲ್ಪಿಸಲು ಗಮನ ಹರಿಸಿ: ಜೀತ ವಿಮುಕ್ತರ ಸಮಸ್ಯೆಗಳ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜೀತ ವಿಮುಕ್ತರಿಗೆ ನೀಡಬೇಕಿರುವ ಗುರುತಿನ ಚೀಟಿ, ಬಿಡುಗಡೆ ಪತ್ರ, ಒದಗಿಸಬೇಕಿರುವ ಪರಿಹಾರ, ಕಲ್ಪಿಸಬೇಕಿರುವ ಸೌಲಭ್ಯಗಳ ಬಗ್ಗೆ ಶೀಘ್ರವೇ ಗಮನ ಹರಿಸಬೇಕು. ಉಪ ವಿಭಾಗಾಧಿಕಾರಿಗಳು ಸಭೆ ಕರೆದು ಜೀತ ವಿಮುಕ್ತರ ಸೌಕರ್ಯಗಳನ್ನು ಒದಗಿಸುವಲ್ಲಿ ಮುಂದಾಗಬೇಕು. ಮುಂದಿನ ಪರಿಶಿಷ್ಟ ಜಾತಿ ವರ್ಗಗಳ ಕುಂದುಕೊರತೆ ಸಭೆಯ ವೇಳೆಗೆ ಕೈಗೊಂಡ ವರದಿ ನೀಡುವಂತೆ ತಿಳಿಸಿದರು.

Advertisement

ಪರಿಶಿಷ್ಟರ ಭೂಮಿ ಮಂಜೂರು, ಸಾಗುವಳಿ ಪತ್ರ, ಇನ್ನಿತರ ಭೂ ಹಕ್ಕುಗಳ ಕುರಿತ ಮನವಿ ಆಲಿಸಿದ ಅವರು, ಪ್ರತಿ ಪ್ರಕರಣದ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸಬೇಕು. ಭೂ ಒಡೆತನ ಯೋಜನೆಯಡಿ ಫ‌ಲಾನುಭವಿಗಳಿಗೆ ಭೂಮಿ ಖರೀದಿಸಿ ನೀಡುವ ಪ್ರಕ್ರಿಯೆಯನ್ನು ವಿಳಂಬ ಮಾಡದೇ ಕಾಲಮಿತಿಯೊಳಗೆ ಸೌಲಭ್ಯ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಾರ್ಯಕ್ರಮ ಅನುಷ್ಠಾನ ಮಾಡಿ: ಪರಿಶಿಷ್ಟ ಜಾತಿ, ವರ್ಗಗಳ ಅನುದಾನದಡಿ ನಿರ್ವಹಿಸಬೇಕಿರುವ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಬೇಕು. ಪರಿಶಿಷ್ಟರ ಅನುದಾನ ವಿನಿಯೋಗದಲ್ಲಿ ಉಲ್ಲಂಘನೆ, ಅಕ್ರಮ, ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು. ಕಾಯ್ದೆ ಪಾಲನೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದು ಡೀಸಿ ತಿಳಿಸಿದರು.

ಸಭೆಯಲ್ಲಿ ಪರಿಶಿಷ್ಟ ಜಾತಿ, ವರ್ಗಗಳ ಗುತ್ತಿಗೆದಾರರಿಗೆ ಕಲ್ಪಿಸಬೇಕಾದ ಅನುಕೂಲ, ಸಂತೇಮರಹಳ್ಳಿಯ ಜೋಡಿಕೊಲೆ ಪ್ರಕರಣ, ಆರೋಗ್ಯ ಕೇಂದ್ರಗಳ ಪರಿಸ್ಥಿತಿ, ನಗರಸಭೆ ವತಿಯಿಂದ ಮೂಲ ಸೌಕರ್ಯ, ಪರಿಶಿಷ್ಟರ ಮೇಲೆ ಹೂಡಲಾಗುತ್ತಿರುವ ದೂರು ಪ್ರಕರಣಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಪಂ ಸಿಇಒ ಹರ್ಷಲ್‌ ಬೋಯರ್‌ ನಾರಾಯಣರಾವ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ದಲಿತ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ವೆಂಕಟರಮಣ ಪಾಪು, ಅರಕಲವಾಡಿ ನಾಗೇಂದ್ರ, ಕೆ.ಎಂ.ನಾಗರಾಜು, ಚಾ.ಗು.ನಾಗರಾಜು, ಶ್ರೀಕಂಠ, ಸಿ.ಎಂ.ಶಿವಣ್ಣ,

ಆಲೂರು ನಾಗೇಂದ್ರ, ರವಿಕುಮಾರ್‌, ಸಿ.ಕೆ.ಮಂಜುನಾಥ್‌, ಜಿ.ಬಂಗಾರು, ಅಂಬರೀಶ್‌, ಸುರೇಶ್‌ನಾಯಕ, ಮುತ್ತಯ್ಯ, ಪಿ.ಸಂಘಸೇನಾ, ಕಾಂತರಾಜು, ಪರ್ವತ ರಾಜು, ಬ್ಯಾಡಮೂಡ್ಲು ಬಸವಣ್ಣ, ಚನ್ನಬಸವಯ್ಯ, ಅಣಗಳ್ಳಿ ಬಸವರಾಜು, ದೊಡ್ಡಿಂದುವಾಡಿ ಸಿದ್ದರಾಜು, ಕೆ.ಸಿದ್ದಯ್ಯ, ರಾಜಶೇಖರ ಮೂರ್ತಿ ಹಾಜರಿದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುತ್ತಿದೆ. ದೌರ್ಜನ್ಯ ದೂರುಗಳು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ತಮ್ಮನ್ನೆ ಭೇಟಿ ಮಾಡಬಹುದು. ಜನರ ಸ್ಪಂದನೆಗೆ ಸದಾ ಸಿದ್ಧರಾಗಿದ್ದೇವೆ.
-ಎಚ್‌.ಡಿ.ಆನಂದಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next