Advertisement

ಕೆಎಫ್‌ಡಿ ನಿಯಂತ್ರಣಕ್ಕೆ ಕ್ರಮ

10:20 AM Jan 12, 2019 | |

ಶಿವಮೊಗ್ಗ: ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಆಯ್ದ ಪ್ರದೇಶಗಳಲ್ಲಿ ಕಂಡು ಬಂದಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದರ ಜೊತೆಗೆ ಬಾಧಿತ ಪ್ರದೇಶದ ನಿವಾಸಿಗಳಿಗೆ ಅಗತ್ಯ ಲಸಿಕೆ ಪೂರೈಸಿ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸಿ. ವೆಂಕಟೇಶ್‌ ಅವರು ಹೇಳಿದರು.

Advertisement

ಶುಕ್ರವಾರ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಜಿಪಂ ಕೆಡಿಪಿ ಸಭೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ನಿರಂತರ ಚಿಕಿತ್ಸೆ ಹಾಗೂ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ ಎಂದರು.

ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದ ಇಳಿಮುಖ ಕಂಡುಬಂದಿದೆ. ಅಲ್ಲದೆ ಜಿಲ್ಲಾಡಳಿತದ ವತಿಯಿಂದ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್‌, ಆ್ಯಂಬುಲೆನ್ಸ್‌, ಹೆಚ್ಚುವರಿ ಸಿಬ್ಬಂದಿ ಹಾಗೂ ವೈದ್ಯರ ನಿಯೋಜನೆ ಹಾಗೂ ಹೆಚ್ಚುವರಿ ವಾಹನಗಳನ್ನು ಒದಗಿಸಲಾಗಿದೆ ಎಂದರು.

ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಅಂತಹ ಪ್ರಕರಣಗಳು ಗೋಚರವಾದಲ್ಲಿ ಸಕಾಲಿಕವಾಗಿ ಚಿಕಿತ್ಸೆ ನೀಡಲು ವೈದ್ಯರ ತಂಡ ಸದಾ ಜಾಗೃತವಾಗಿರಲಿದೆ. ಜಿಲ್ಲೆಯ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಲಾಗಿದೆ. ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳು ಅಥವಾ ಅವರ ಸಂಬಂಧಿಕರು ದೂರವಾಣಿ ಕರೆ ಮಾಡಿ ಮುಂಚಿತವಾಗಿ ಮಾಹಿತಿ ನೀಡಿದಲ್ಲಿ ತಕ್ಷಣದ ಕ್ರಮಕ್ಕೆ ಅನುಕೂಲವಾಗಲಿದೆ ಎಂದರು.

ಈ ಹಿಂದೆ ಕಾಯಿಲೆಯ ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದ 63 ಜನ ರೋಗಿಗಳಲ್ಲಿ ಗುಣಮುಖರಾದ 33 ರೋಗಿಗಳನ್ನು ಸರ್ಕಾರಿ ವೆಚ್ಚದಲ್ಲಿ ಮನೆಗೆ ತಲುಪಿಸಲಾಗಿದೆ. ಅದರಲ್ಲಿ 25 ರೋಗಿಗಳನ್ನು ಮಂಗನ ಕಾಯಿಲೆ ಬಾಧಿತರಲ್ಲ ಎಂದು ಗುರುತಿಸಲಾಗಿದೆ ಎಂದ ಅವರು ಪ್ರಸ್ತುತ ಸಾಗರದಲ್ಲಿ 4, ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ 1 ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಮತ್ತು ಕೋಣಂದೂರು ಪ್ರದೇಶಗಳಲ್ಲಿ ಚಿಕಿತ್ಸೆ ಹಾಗೂ ಜಾಗೃತಿಗಾಗಿ ಕಾರ್ಯಕ್ರಮ ನಿರಂತರವಾಗಿದೆ ಎಂದರು.

Advertisement

ತಾಲೂಕು ವೈದ್ಯಾಧಿಕಾರಿ ಡಾ| ದಿನೇಶ್‌ ಮಾತನಾಡಿ, ಈವರೆಗೆ ಮಂಗನಕಾಯಿಲೆಗೆ 536 ರೋಗಿಗಳು ಹೊರರೋಗಿಗಳಾಗಿ ಹಾಗೂ 102 ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಜ್ವರಬಾಧಿತ ಒಟ್ಟು 763ರೋಗಿಗಳಲ್ಲಿ ಶಂಕಿತ 131 ರೋಗಿಗಳನ್ನು ಪರಿಶೀಲಿಸಲಾಗಿ 17ಪ್ರಕರಣಗಳು ದೃಢಪಟ್ಟಿವೆ ಎಂದರು. ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ 6 ಜನ ಮರಣ ಹೊಂದಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್‌ ಮಾತನಾಡಿ, ಇತ್ತೀಚೆಗೆ ಸಾಗರ ತಾಲೂಕಿಗೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದಾಗ , ವೈದ್ಯರಲ್ಲಿಯೇ ಸರಿಯಾದ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣದಲ್ಲಿಯೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದ ಅವರು, ಅಗತ್ಯವಿರುವಲ್ಲಿ ನಿವೃತ್ತ ವೈದ್ಯರ ಸೇವೆ ಪಡೆಯಬಹುದಾಗಿದೆ. ಮೃತರ ಪ್ರತಿ ಕುಟುಂಬಕ್ಕೆ ರೂ.10.00ಲಕ್ಷ ರೂ.ಗಳ ಪರಿಹಾರ ಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಪಂ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರು.

ಕಳೆದ ಸಾಲಿನಲ್ಲಿ ಅಡಕೆ ಕೊಳೆರೋಗಕ್ಕೆ ತುತ್ತಾದ ಸುಮಾರು 10,000 ಹೆಕ್ಟೇರ್‌ ಬೆಳೆಗೆ ಪರಿಹಾರಧನವಾಗಿ ರೂ.18.50ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪೈಕಿ ಈವರೆಗೆ 3.50ಕೋಟಿ ರೂ.ಬಿಡುಗಡೆಯಾಗಿದ್ದು, ಸುಮಾರು 25,000 ರೈತರಲ್ಲಿ ಸುಮಾರು 4,500 ರೈತರ ಖಾತೆಗೆ ಹಣ ಜಮಾವಣೆ ಆಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ| ಯೋಗೀಶ್‌ ಅವರು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸುಮಂಗಳ ಕುಚಿನಾಡ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಶಿವರಾಮೇ ಗೌಡ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next