ವಿಧಾನಪರಿಷತ್ತು: ರಾಜ್ಯವನ್ನು ಮಾದಕ ದ್ರವ್ಯ ಮುಕ್ತವಾಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಮೂರು ಕಡೆ ಮಾದಕ ದ್ರವ್ಯ ನಿಯಂತ್ರಣ ವಿಶೇಷ ಕೋಶ ಹಾಗೂ 38 ಸೈಬರ್ ಕ್ರೈಂ ಹಾಗೂ ಮಾದಕ ದ್ರವ್ಯ ತಡೆ ಆದ್ಯತೆಯ ನೂತನ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯ ಐವನ್ ಡಿ’ಸೋಜ ಅವರ ಗಮನ ಸೆಳೆಯುವ ಸೂಚನೆ ವೇಳೆ ಮಂಗಳವಾರ ವಿವಿಧ ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮಾದಕ ದ್ರವ್ಯ ದಂಧೆ ಕಡಿವಾಣಕ್ಕಾಗಿಯೇ ಬೆಂಗಳೂರು, ಮಂಗಳೂರು ಹಾಗೂ ಬೆಳಗಾವಿಯಲ್ಲಿ ಮಾದಕ ದ್ರವ್ಯ ನಿಯಂತ್ರಣ ವಿಶೇಷ ಕೋಶ (ನಿಕೋಟಿಕ್ಸ್ ಸೆಲ್) ಹಾಗೂ 38 ನೂತನ ಪೊಲೀಸ್ ಸ್ಟೇಶನ್‌ಗಳನ್ನು ಆರಂಭಿಸಲಾಗುತ್ತದೆ ಎಂದರು.
ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಮಾದಕ ದ್ರವ್ಯ ದಂಧೆ ತಡೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳ ತಡೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಹುಕ್ಕಾಬಾರ್, ಮಸಾಜ್ ಪಾರ್ಲರ್, ಕ್ಲಬ್‌ಗಳ ವಿರುದ್ಧ ತೀಕ್ಷ್ಣ ಗಮನ ಹರಿಸಲು ಸೂಚಿಸಿದ್ದೇನೆ ಎಂದರು. ಮಾದಕ ದ್ರವ್ಯ ರಾಜ್ಯದ ವಿವಿಧ ಜಿಲ್ಲೆಗಳು ಅಲ್ಲದೆ, ನೆರೆಯ ಕೇರಳ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ ಇನ್ನಿತರ ಕಡೆಯಿಂದ ಬರುವ ಮಾಹಿತಿ ಇದ್ದು, ಇದರ ತಡೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗಾಂಜಾ ಬೆಳದರೂ ಗೂಂಡಾ ಕಾಯ್ದೆ: ಗಾಂಜಾ ಸೇರಿದಂತೆ ಮಾದಕ ದ್ರವ್ಯ ಮಾರಾಟ ಹಾಗೂ ಬಳಕೆ ಅಪರಾಧ. ಅದೇ ರೀತಿ ಗಾಂಜಾ ಬೆಳೆಯುವುದು ಅಪರಾಧವಾಗಿದ್ದು, ಬೆಳೆಯುವವರ ವಿರುದ್ಧವೂ ಗೂಂಡಾ ಕಾಯ್ದೆ ಪ್ರಯೋಗಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪೇಯಿಂಗ್ ಗೆಸ್ಟ್ ಕೇಂದ್ರಗಳ ಮೇಲೂ ತೀವ್ರ ನಿಗಾ ಇರಿಸಲಾಗಿದೆ. ಮಹಿಳಾ ಕಾಲೇಜುಗಳಲ್ಲಿ ದೂರು ಪಟ್ಟಿಗೆ ಇರಿಸಲು ಸೂಚಿಸಲಾಗಿದೆ ಎಂದರು. ಇದಕ್ಕೂ ಮುನ್ನ ವಿಷಯದ ಮೇಲೆ ಮಾತನಾಡಿದ ವಿವಿಧ ಪಕ್ಷಗಳ ಸದಸ್ಯರಾದ ಐವನ್ ಡಿ’ಸೋಜ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ತಾರಾ ಅನುರಾಧ, ಸಿ.ಎಂ.ಇಬ್ರಾಹಿಂ, ಭಾನುಪ್ರಕಾಶ್, ಪ್ರಾಣೇಶ್, ಶರಣಪ್ಪ ಮಟ್ಟೂರ, ರಾಮಚಂದ್ರಗೌಡ, ಉಗ್ರಪ್ಪ, ಜಯಮ್ಮ, ಶ್ರೀಕಾಂತ ಘೋಕ್ಲೃಕರ, ಪುಟ್ಟಣ್ಣ ಇನ್ನಿತರರು ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಸುಮಾರು 1699 ಮಾದಕ ದ್ರವ್ಯ ಪ್ರಕರಣಗಳು ಪತ್ತೆಯಾಗಿವೆ ಎಂದರು.