Advertisement

ಸಂಚಾರ ನಿಯಮ ಭಂಜಕರ ವಿರುದ್ಧ ಕ್ರಮ ಅನಿವಾರ್ಯ

12:03 AM May 30, 2023 | Team Udayavani |

ರಾಜ್ಯದಲ್ಲಿ ಕಳೆದೆರಡು ದಿನಗಳ ಅವಧಿಯಲ್ಲಿ 2 ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 16 ಮಂದಿ ಸಾವಿಗೀಡಾಗಿದ್ದಾರೆ. ಈ ದುರ್ಘ‌ಟನೆಗಳು ಇಡೀ ರಾಜ್ಯದ ಜನತೆಯನ್ನು ತಲ್ಲಣಗೊಳಿಸುವಂತೆ ಮಾಡಿದೆ.

Advertisement

ಸೋಮವಾರ ಅಪರಾಹ್ನ ತಿ.ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಕೊಳ್ಳೇಗಾಲ-ತಿ.ನರಸೀಪುರ ರಸ್ತೆಯಲ್ಲಿ ಇನೊವಾ ಕಾರು ಮತ್ತು ಖಾಸಗಿ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದರು. ಇನ್ನು ರವಿವಾರ ಸಂಜೆ ಕುಷ್ಟಗಿ ತಾಲೂಕಿನ ಕಲಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಇಂಡಿಕಾ ಕಾರು ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಈ ಎರಡೂ ಅಪಘಾತಗಳಿಗೆ ನಿರ್ಲಕ್ಷ್ಯ, ಅತಿವೇಗ, ಸಂಚಾರ ನಿಯಮಗಳೆಲ್ಲವನ್ನೂ ಗಾಳಿಗೆ ತೂರಿರುವುದು ಕಾರಣ ಎಂಬುದು ಮೇಲ್ನೋ ಟಕ್ಕೆ ಕಾಣಿ ಸು ತ್ತಿದೆ. ಹೀಗೆ ವಾಹನ ಚಾಲಕರ ಅಸಡ್ಡೆ ಮತ್ತು ದುಂಡಾವರ್ತನೆಯ ಧೋರಣೆಯ ಕಾರಣಗಳಿಗಾಗಿ ಅಮಾಯಕರು ತಮ್ಮ ಜೀವವನ್ನೇ ಕಳೆದುಕೊಳ್ಳುವಂತಾಗಿದೆ.

ಹಾಗೆಂದು ದಿನನಿತ್ಯ ಸಂಭವಿಸುವ ರಸ್ತೆ ಅಪಘಾತಗಳಿಗೆಲ್ಲ ವಾಹನ ಚಾಲಕರೇ ಕಾರಣ ಎಂದು ಸಾರಾಸಗಟಾಗಿ ತೀರ್ಮಾನಕ್ಕೆ ಬರುವುದು ಸರಿಯಲ್ಲ. ರಸ್ತೆಗಳಲ್ಲಿರುವ ಹೊಂಡಗಳು, ಅವೈಜ್ಞಾನಿಕವಾಗಿ ನಿರ್ಮಿಸ ಲಾಗಿರುವ ಹಂಪ್ಸ್‌, ವಾಹನಗಳಲ್ಲಿನ ತಾಂತ್ರಿಕ ದೋಷಗಳು ಕೂಡ ವಾಹನ ಅಪಘಾತಗಳಿಗೆ ಕಾರಣಗಳಾಗುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆಗಳು ಮತ್ತು ಹೆದ್ದಾರಿಗಳ ಸ್ಥಿತಿ ಬಹಳಷ್ಟು ಸುಧಾರಣೆ ಕಂಡಿದೆ. ಹೆದ್ದಾರಿ ಗಳಂತೂ ವಿಸ್ತರಣೆಯಾಗಿ ಕಾಂಕ್ರೀಟ್‌ ಅಥವಾ ಫೇವರ್‌ಫಿನಿಶ್‌ ಯಂತ್ರದ ಮೂಲಕ ಹೊಸದಾಗಿ ಡಾಮರು ಕಂಡಿದ್ದರೆ ಇನ್ನು ರಾಜ್ಯ ಹೆದ್ದಾರಿಗಳು ಕೂಡ ಅಭಿವೃದ್ಧಿ ಹೊಂದಿವೆ. ಹೀಗಾಗಿ ವಾಹನ ಚಾಲಕರ ಧಾವಂತಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಹೆದ್ದಾರಿಗಳ ಇಕ್ಕೆಲಗಳಲ್ಲಿ ಹಾಕಿರುವ ಸೂಚನ ಫ‌ಲಕಗಳತ್ತ ಚಾಲಕರು ಕಣ್ಣು ಹಾಯಿಸುವುದೇ ಇಲ್ಲ. ಸಂಚಾರ ನಿಯಮಗಳ ಪಾಲನೆಯ ಮಾತಂತೂ ದೂರವೇ ಸರಿ. ಈ ಹಿಂದೆ ರಸ್ತೆ ದುರಸ್ತಿ ಮಾಡ ದ ಕಾರಣದಿಂದಾಗಿಯೇ ಅಪಘಾತಗಳು ಸಂಭವಿಸುತ್ತಿವೆ ಎಂದು ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿತ್ತು. ಆದರೆ ಈಗ ಹೆದ್ದಾರಿಗಳು ಅಭಿವೃದ್ಧಿಗೊಂಡಿದ್ದರೂ ಪ್ರಯಾಣಿಕರ ಸುರಕ್ಷೆಗೆ ಮಾತ್ರ ಯಾವುದೇ ಖಾತರಿ ಇಲ್ಲದಂತಾಗಿದೆ.

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತಪಟ್ಟವರ ಕುಟುಂಬಗಳಿಗೆ ಸರಕಾರ ಪರಿಹಾರ ಘೋಷಿಸಿದೆ. ಆದ ರೆ ಕೇವಲ ಪರಿಹಾರ ವಿತರಣೆಗಷ್ಟೇ ಸರಕಾರ ತನ್ನ ಜವಾಬ್ದಾರಿಯನ್ನು ಸೀಮಿತ ಗೊಳಿಸಬಾರದು. ಭವಿಷ್ಯದಲ್ಲಿ ಇಂತಹ ಭೀಕರ ಅಪಘಾತಗಳು ಸಂಭವಿ ಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯನ್ನು ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಕಾನೂನು ನಿಯಮಾವಳಿಗಳಿಗನುಸಾರವಾಗಿ ನಿಭಾಯಿಸಬೇಕಿದೆ. ಸಂಚಾರ ನಿಯಮಗಳನ್ನು ಉಲ್ಲಂ ಸುವವರಿಗೆ ದಂಡ ವಿಧಿಸುವ ಜತೆಯಲ್ಲಿ ಕಾನೂನು ಪ್ರಕ್ರಿಯೆ ನಡೆಯಬೇಕಿದೆ. ಅಷ್ಟು ಮಾತ್ರವಲ್ಲದೆ ಸಂಬಂಧಿತ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾವಣೆಯ ಸಂದರ್ಭದಲ್ಲಿ ನಿಯಮ ಉಲ್ಲಂ ಸಿದವರೊಂದಿಗೆ ಯಾವುದೇ ರಾಜಿ ಅಥವಾ ಹೊಂದಾಣಿಕೆ ಮಾಡಿಕೊಳ್ಳದೆ ನಿಷ್ಠುರ ಕ್ರಮ ಕೈಗೊಳ್ಳಬೇಕು. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಾಹನ ಚಾಲಕರು ಮತ್ತು ಪಾದಚಾರಿಗಳು ಕೂಡ ಸಂಚಾರ ನಿಯಮಾವಳಿಗಳನ್ನು ಪಾಲಿಸುವುದು ತಮ್ಮ ಆದ್ಯ ಕರ್ತವ್ಯ ಎಂಬುದನ್ನು ಮನಗಾಣಬೇಕು.

Advertisement

Udayavani is now on Telegram. Click here to join our channel and stay updated with the latest news.

Next