Advertisement

ಸರ್ಕಾರಕ್ಕೆ ಕೆಟ್ಟ ಹೆಸರು ತರುವವರ ವಿರುದ್ಧ ಕ್ರಮ

06:00 AM Jun 23, 2018 | |

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ಕೋಮುವಾದಿಗಳು ಹಾಗೂ ಜಾತಿವಾದಿಗಳು ಅನಗತ್ಯ ಗೊಂದಲ ಸೃಷ್ಠಿಸುತ್ತಿದ್ದಾರೆಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅಂತಹ ಶಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂ ಚನೆ ನೀಡಿದ್ದೇನೆ ಎಂದರು.

ಹಿಂದೂ ಸಂಘಟನೆಗಳು ಮಾತ್ರವಲ್ಲ, ಬೇರೆ ಯಾವುದೇ ಸಂಘಟನೆ ಅಥವಾ ಸಂಸ್ಥೆಯಾಗಲಿ, ರಾಜ್ಯದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕೋಮು ಗಲಭೆಗೆ ಅವಕಾಶ ನೀಡಬಾರದು. ಸಮಾಜದಲ್ಲಿ ಅಶಾಂತಿ ಮೂಡಿಸುವ ಹಾಗೂ ಕೋಮು ಭಾವನೆ ಕೆರಳಿಸುವ ಘಟನೆಗಳು ನಡೆದರೆ ಆಯಾ ವ್ಯಾಪ್ತಿಯ ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ವಲಯ ಐಜಿಪಿಗಳನ್ನು ಹೊಣೆ
ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀರಾಮಸೇನೆ ಸೇರಿ ಯಾವುದೇ ಸಂಘಟನೆಗಳು ಸಹ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಬಾರದು.

Advertisement

ಅಂತಹ ವ್ಯಕ್ತಿ, ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುವುದು. ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಗಾ ವಹಿಸಿ ಪೊಲೀಸ್‌ ಠಾಣೆಗಳನ್ನು ಜನಸ್ನೇಹಿಯನ್ನಾಗಿ ರೂಪಿಸಲು ಸೂಚಿಸಲಾಗಿದೆ ಎಂದರು.

ಮಾಫಿಯಾ ಸಹಿಸಲ್ಲ: ಇತ್ತೀಚೆಗೆ ವಿಜಯಪುರದಲ್ಲಿ ನಡೆದ ನಕಲಿ ಎನ್‌ಕೌಂಟರ್‌ ಪ್ರಕರಣ ಹಾಗೂ ದನದ ವ್ಯಾಪಾರಿ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಪೊಲೀಸರೇ ಭಾಗಿಯಾಗಿರುವುದು ಸರಿಯಲ್ಲ.

ಮಾಫಿಯಾದವರ ಜತೆ ಪೊಲೀಸ್‌ ಅಧಿಕಾರಿಗಳು ಶಾಮೀಲು ಆಗುವುದನ್ನು ಸರ್ಕಾರ  ಸಹಿಸುವುದಿಲ್ಲ.
ಕೋಮುಗಲಭೆಗೆ ಪ್ರಚೋದನೆ ನೀಡುವ ವ್ಯಕ್ತಿಗಳ ಜತೆಯೂ ಕೆಲವು ಪೊಲೀಸರು ಒಡನಾಟ ಇಟ್ಟುಕೊಂಡಿರುವ ಮಾಹಿತಿ ಇದೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಬ್‌ ಬೀಟ್‌’ ವ್ಯವಸ್ಥೆಗೆ ಶಹಬ್ಟಾಸ್‌ಗಿರಿ
ಉಪಮುಖ್ಯಮಂತ್ರಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಕೈಗೊಂಡಿದ್ದ “ಸಬ್‌ ಬೀಟ್‌’ ವ್ಯವಸ್ಥೆಗೆ ಕೇಂದ್ರ ಸರ್ಕಾರ ಶಹಬ್ಟಾಸ್‌ಗಿರಿ ಹೇಳಿದೆ. ಇದೇ ಮಾದರಿಯನ್ನು ದೇಶದ ಎಲ್ಲ ರಾಜ್ಯಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಆಯಾ ರಾಜ್ಯಗಳಿಗೆ ಪತ್ರ ಬರೆದಿದೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.

ದೇಶದಲ್ಲಿ ಅಪರಾಧ ಹೆಚ್ಚಳ ಸಂಖ್ಯೆಯಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆಯಾದರೂ ಅಪರಾಧ ಪ್ರಕರಣಗಳ ನಿಯಂತ್ರಣ ಮಾಡಲು ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹುದ್ದೆ ಭರ್ತಿ ಮುಂದುವರಿಕೆ: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಇನ್ಸ್‌ಪೆಕ್ಟರ್‌, ಸಬ್‌ಇನ್ಸ್‌ಪೆಕ್ಟರ್‌, ಪೇದೆ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವುದು. “ಪೊಲೀಸ್‌ ಗೃಹ’ ಹೆಸರಿನಲ್ಲಿ ಎಲ್ಲ ಪೊಲೀಸ್‌ ಸಿಬ್ಬಂದಿಗೆ 2020ರೊಳಗೆ ವಸತಿ ನಿರ್ಮಿಸಲಾಗುವುದು ಎಂದರು.

ಮುಖ್ಯಕಾರ್ಯದರ್ಶಿ ರತ್ನಪ್ರಭಾ, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌.ರಾಜು, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಎಡಿಜಿಪಿ ಪರಶಿವಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಇದ್ದರು.

ಕೆಎಸ್‌ಪಿ’ ಆ್ಯಪ್‌ ಬಿಡಗಡೆ
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು “ಕರ್ನಾಟಕ ರಾಜ್ಯ ಪೊಲೀಸ್‌(ಕೆಎಸ್‌ಪಿ)’ ಆ್ಯಪ್‌ ಬಿಡುಗಡೆ ಮಾಡಿದರು. ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಯಾವುದೇ ಕಾನೂನು ಬಾಹಿರಚಟುವಟಿಕೆಗಳ ಬಗ್ಗೆ ಈ ಆ್ಯಪ್‌ ಮೂಲಕ ಸ್ಥಳೀಯ ಠಾಣೆಗೆ ಮಾಹಿತಿ ನೀಡಬಹುದು.

ಎಸ್‌ಐಟಿ ಕಾರ್ಯಕ್ಕೆ ಪ್ರಶಂಸೆ
ಸಭೆಯಲ್ಲಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಎಸ್‌ ಐಟಿಯ ತನಿಖಾ ಪ್ರಗತಿಗೆ ಕುಮಾರಸ್ವಾಮಿ ಹಾಗೂ ಮತ್ತು ಡಾ. ಜಿ.ಪರಮೇಶ್ವರ್  ಮೆಚ್ಚುಗೆ ಸೂಚಿಸಿದರು. ಅಲ್ಲದೆ, ಪ್ರಕರಣ ಇನ್ನೂ ತಾರ್ಕಿಕ ಅಂತ್ಯ ಕಾಣ ಬೇಕಿದ್ದು, ತನಿಖೆಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next