ಬೆಂಗಳೂರು: ಸೂಕ್ತ ದಾಖಲೆ ಪರಿಶೀಲನೆ ನಡೆಸದೆ ಬೈಕ್ ಸೇರಿದಂತೆ ಮತ್ತಿತರೆ ವಸ್ತುಗಳನ್ನು ಖರೀದಿ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆಯಲ್ಲಿ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂತಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಸೇವನೆ, ಸುಲಭವಾಗಿ ಹಣ ಸಂಪಾದನೆ ಹಾಗೂ ಐಷಾರಾಮಿ ಸೇರಿದಂತೆ ಮತ್ತಿತರ ಕಾರಣಕ್ಕಾಗಿಯೇ ಕಳ್ಳತನ ಪ್ರಕರಣಗಳಲ್ಲಿ ಇಳಿಯುತ್ತಿರುವುದು ಹೆಚ್ಚಾಗಿದೆ.
ಹೀಗಾಗಿಯೇ ಕದ್ದ ಬೈಕುಗಳನ್ನು ಖರೀದಿಸುವವರು ದಾಖಲಾತಿ ಪರಿಶೀಲಿಸದೆ, ಬೈಕ್ ಖರೀದಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಕ್ಕೆ ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಮನೆಕಳ್ಳತನ, ಬೈಕ್ ಕಳ್ಳತನ ಸೇರಿದಂತೆ ವಿವಿಧ ರೀತಿಯ ಕಳ್ಳತನವಾಗುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿತ್ತು. ಆದ್ಯಾಗೂ ಕಳ್ಳರು ತಮ್ಮ ಕೈಚಳಕವನ್ನು ಮುಂದುವರಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ನಿರ್ಲಕ್ಷ್ಯ ಭಾವನೆ ತೊರದೆ ಎಚ್ಚರದಿಂದ ಇರಬೇಕು ಎಂದು ಹೇಳಿದರು.
558 ಪ್ರಕರಣ, 7.46 ಕೋಟಿ ರೂ.ಮೌಲ್ಯದ ಕಳವು ಮಾಲು ಜಫ್ತಿ!: ಇನ್ನು ನಗರ ಪೊಲೀಸರು ನಗರದ ವಿವಿಧ ಭಾಗಗಳಲ್ಲಿ ನಡೆದ ಮನೆಕಳವು, ಬೈಕ್ ಕಳ್ಳತನ ಸೇರಿದಂತೆ 558 ಪ್ರಕರಣಗಳನ್ನು ಬೇಧಿಸಿದ್ದಾರೆ. ಜೊತೆಗೆ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ 309 ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 18.36 ಕೆ.ಜಿ. ಚಿನ್ನ, 14.30 ಕೆ.ಜಿ.ಬೆಳ್ಳಿ, 236 ಬೈಕ್ ಸೇರಿದಂತೆ ಒಟ್ಟು 7.46 ಕೋಟಿ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪೈಕಿ ಕೇಂದ್ರ ವಿಭಾಗದಿಂದ 1.58 ಕೋಟಿ, ಉತ್ತರ ವಿಭಾಗದಿಂದ 1.61 ಕೋಟಿ, ಪಶ್ಚಿಮ ವಲಯದಿಂದ 2.57 ಹಾಗೂ ದಕ್ಷಿಣ ವಿಭಾಗದಿಂದ 1.70 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.