ತುಮಕೂರು: ಕೋವಿಡ್ 19 ದಿಂದ ದೇಶ ಸಂಕಷ್ಟದಲ್ಲಿದ್ದು, ರೈತರು ಬೆಳೆದರೆ ಮಾತ್ರ ದೇಶ ಉದ್ಧಾರ ಆಗಲು ಸಾಧ್ಯ ಎನ್ನುವುದನ್ನು ಅರಿತು ಕೃಷಿ ವಲಯಕ್ಕೆ ಲಾಕ್ ಡೌನ್ ನಡುವೆಯೂ ಸಡಿಲಿಕೆಯನ್ನು ನೀಡಲಾಗಿತ್ತು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಿಳಿಸಿದರು.
ತಾಲೂಕಿನ ಬುಗುಡನಹಳ್ಳಿ ಗ್ರಾಮದಲ್ಲಿ ಕೋವಿಡ್ 19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪಡಿತರ ವಿತರಿಸಿ ಮಾತನಾಡಿದ ಅವರು, ಆಹಾರವನ್ನು ಸರಿಯಾಗಿ ಪೂರೈಕೆ ಮಾಡದ 150 ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ಹಣ ಪಡೆಯದಂತೆ ಮನವಿ ಮಾಡಿದರೂ, ಅಂಗಡಿ ಮಾಲೀಕರು ಕೇಳದೇ ಮೋಸ ಮಾಡುತ್ತಿದ್ದ ಅಂಗಡಿಗಳು ಹಾಗೂ ಕಾರ್ಯ ನಿರ್ವಹಿಸದ ಅಧಿಕಾರಿ ಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಕಳಪೆ ಪಡಿತರವನ್ನು ವಿತರಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ನೀಡುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ರಾಗಿ ಬೆಳೆಯನ್ನು ಹೆಚ್ಚಾಗಿ ಬೆಳೆಯುವುದರಿಂದ 2ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ರೈತರಿಂದ ಖರೀದಿಸಲಾಗಿದ್ದು, 96 ಸಾವಿರ ರೈತರು ರಾಗಿ ಮಾರಲು ನೋಂದಣಿ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಒಂದು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಕಳೆದ ತಿಂಗಳಿಂದ ದೇಶ ಸ್ತಬ್ಧವಾಗಿದೆ, ಕೋವಿಡ್ 19 ವಿರುದ್ಧ ಹೋರಾಡಲು ಯುದ್ಧ ಮಾಡುವಂತೆ ಪ್ರಧಾನಿ ಮೋದಿ ಅವರು ನೀಡಿದ ಕರೆಯಂತೆ ದೇಶದ ಜನ ಯುದ್ಧ ಮಾಡಿದ್ದಾರೆ, ಕೊನೆ ಹಂತದಲ್ಲಿ ಭಾರತ ಗೆಲ್ಲಲ್ಲು ಜೂನ್, ಜುಲೈವರೆಗೆ ಹೋರಾಡಬೇಕಿದೆ ಎಂದು ತಿಳಿಸಿದರು.