Advertisement

ಕಳಪೆ ಯಂತ್ರೋಪಕರಣ ವಿತರಕರ ವಿರುದ್ಧ ಕ್ರಮ

06:59 AM May 29, 2020 | Lakshmi GovindaRaj |

ತುಮಕೂರು: ಪೂರ್ವ ಮುಂಗಾರು ಆರಂಭವಾಗಿದೆ ರೈತರು ಕೃಷಿ ಚಟುವಟಿಕೆ ಆರಂಭಿಸುತ್ತಿದ್ದಾರೆ, ರೈತರಿಗೆ ತೊಂದರೆಯಾಗದಂತೆ ಉತ್ತಮ ಗುಣಮಟ್ಟದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ರೈತರಿಗೆ ಕಳಪೆ ಯಂತ್ರಗಳನ್ನು  ವಿತರಿಸಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ಶಾಸಕ ಡಿ.ಸಿ.ಗೌರಿಶಂಕರ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ತಾಲೂಕಿನ ಊರ್ಡಿಗೆರೆ ಗ್ರಾಮದಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ಪೂರ್ವ ಮುಂಗಾರು  ಬಿತ್ತನೆಗೆ ಶೇಂಗಾ ಸೇರಿದಂತೆ ಇತರೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ, ಕೃಷಿ ಉಪಕರಣ ವಿತರಿಸಿ ಮಾತನಾಡಿ, ಅನ್ನದಾತರಿಗೆ ಕಳಪೆ ಕೃಷಿ ಉಪಕರಣ, ಕಳಪೆ ಬೀಜಗಳನ್ನು ವಿತರಣೆ  ಮಾಡುವುದನ್ನು ನಾನು ಸಹಿಸುವುದಿಲ್ಲ. ಕಳಪೆ ಕೃಷಿ ಉಪಕರಣಗಳನ್ನು ಸರಬರಾಜು ಮಾಡಿದ ಬಾಡಿಗೆ ಕೃಷಿ ಉಪಕರಣಗಳ ವಿತರಕರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೃಷಿ ಅಧಿಕಾರಿಗೆ ತಾಕೀತು ಮಾಡಿದರು.

ರೈತರೇ ದೇಶಕ್ಕೆ ಬೆನ್ನೆಲುಬು  ಅಂಥವರಿಗೆ ಕಳಪೆ ಗುಣಮಟ್ಟದ ಕೃಷಿ ಯಂತ್ರೋಪಕರಗಳನ್ನು ಸರಬರಾಜು ಮಾಡಿ ರೈತರ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗದಂತೆ ಗುಣಮಟ್ಟದ ಯಂತ್ರೋಪಕರಗಳನ್ನು ತಕ್ಷಣ ನೀಡಲು ಕ್ರಮ ವಹಿಸಬೇಕೆಂದು ಸೂಚನೆ  ನೀಡಿದರು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದೇ ಗ್ರಾಮಸ್ಥರು ಫ್ಲೋರೈಡ್‌ ನೀರನ್ನೇ ಉಪಯೋಗಿಸುತ್ತಿದ್ದುದನ್ನು ಅರಿತು ಸಾರ್ವಜನಿಕರ ಒತ್ತಾಸೆಯ ಮೇರೆಗೆ ಶಾಸಕರ ನಿಧಿಯಿಂದ ಒಂದು ಘಟಕಕ್ಕೆ  12  ಲಕ್ಷ ರೂ.ನಂತೆ 6 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಸುಮಾರು 72 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದರು.

ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವ ಡಿ.ಟಿ.ಪಾಳ್ಯ, ಐನಾಪುರ,  ಚಿಕ್ಕಕೊರಟಗೆರೆ, ಚಿಕ್ಕಾಪುರ, ಕೆಂಬಳಲು, ಕೈದಾಳ ಗ್ರಾಮಗಳಲ್ಲಿ ನೂತನವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು  ನಿರ್ಮಾಣ ಮಾಡಲಾಗಿದೆ ಇದರಿಂದ ಆ ಗ್ರಾಮಗಳಲ್ಲಿ ಉದ್ಭವಿಸಿದ್ದ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು  ನುಡಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಹಾಲನೂರು ಅನಂತಕುಮಾರ್‌, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆಂಗೇಗೌಡ, ಕೃಷಿ ಅಧಿಕಾರಿ ಆಶಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next