ಸಕಲೇಶಪುರ: ಸರ್ಕಾರಿ ಕಚೇರಿಗಳಲ್ಲಿ ನಿಗದಿತ ಸಮಯದಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡದಿದ್ದಲ್ಲಿ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಕಾಲ ಮಿಷನ್ ಆಡಳಿತ ಅಧಿಕಾರಿ ಕೆ.ಮಥಾಯಿ ಎಚ್ಚರಿಸಿದರು.
ಪಟ್ಟಣದ ಮಿನಿ ವಿಧಾನಸೌಧಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಕೆಲವು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಸಕಾಲ ಜಾರಿಗೆ ಬಂದು ಸುಮಾರು 8 ವರ್ಷ ಗಳಾಗುತ್ತಿದ್ದರೂ ಸಕಾಲ ಸೇವೆಯ ಕುರಿತು ಒಂದು ಬೋರ್ಡ್ ಹಾಕಿಲ್ಲ. ಸಕಾಲದಲ್ಲಿ ಯಾವ ಸೇವೆ ದೊರೆಯಲಿದೆ ಎಷ್ಟು ದಿನ ಸೇವೆ ದೊರೆಯದಿದ್ದರೆ ಯಾರಿಗೆ ದೂರು ನೀಡಬೇಕು ಎಂದು ಸೂಚಿಸುವ ಯಾವ ಫಲಕವೂ ಕಚೇರಿಯಲ್ಲಿ ಇಲ್ಲ. ಹೀಗಾದರೆ ಹೇಗೆ ಇನ್ನೇರಡು ದಿನಗಳಲ್ಲಿ ಫಲಕ ಅಳವಡಿಸಿ ನಮಗೆ ಮಾಹಿತಿ ನೀಡಿ ತಪ್ಪಿದಲ್ಲಿ ಮುಂದಿನ ಕ್ರಮಕ್ಕೆ ನಾವು ಜವಾಬ್ದಾರರಲ್ಲ ಎಂದರು.
ಈ ವೇಳೆ ಸಕಾಲದಲ್ಲಿ ಬೆಳೆ ದೃಢೀಕರಣಕ್ಕೆ ಏಳು ದಿನ ನಿಗದಿಪಡಿಸಲಾಗಿದೆ ಆದರೆ ಸರ್ವರ್ ಸಮಸ್ಯೆ ಯಿಂದ ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇವಾರಿ ನಡೆಸಲಾಗುತ್ತಿಲ್ಲ ಎಂದು ಅಧಿಕಾರಿಗಳು ಅಲವತ್ತುಕೊಂಡರು. ಇದಕ್ಕೆ ಭೂಮಿಕೋಶಕ್ಕೆ ದೂರು ನೀಡುವಂತೆ ಮಥಾಯಿ ಸೂಚಿಸಿದರು.
ಮಾಜಿ ಸೈನಿಕರಿಗೆ ಶೀಘ್ರಭೂಮಿ ನೀಡಿ: ಈ ವೇಳೆ ಮಾಜಿ ಸೈನಿಕರ ಸಂಘದ ಸದಸ್ಯರು ಮನವಿ ಮಾಡಿ, ನಮಗೆ 1971ರಲ್ಲಿ ತಾಲೂಕಿನಲ್ಲಿ 4,855 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಆದರೆ ಈ ಎಲ್ಲಾ ಭೂಮಿಯನ್ನು ಅಧಿಕಾರಿಗಳು ಹೇಮಾವತಿ ಮುಳುಗಡೆ ಸಂತ್ರಸ್ತರಿಗೆ ಹಂಚುತ್ತಿದ್ದಾರೆ. ಕಳೆದ ಒಂದು ದಶಕದಿಂದ ಕಚೇರಿಗೆ ಅಲೆಯುತ್ತಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ರಾಜ್ಯ ಉಚ್ಚ ನ್ಯಾಯಲಯ ನಮಗೆ ಭೂಮಿ ನೀಡುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ನೀಡಿದರು.
ಈ ವೇಳೆ ಮಾತನಾಡಿದ ಮಥಾಯಿ, ಶೀಘ್ರವೇ ಮಾಜಿ ಸೈನಿಕರಿಗೆ ಜಮೀನು ಮಂಜೂರು ಮಾಡುವಂತೆ ಸೂಚಿಸಿದರು. ನಂತರ ಮಾತನಾಡಿ ಸರ್ಕಾರದಿಂದ ಜನಸೇವಕ್ ಎಂಬ ಯೋಜನೆ ಯನ್ನು ಸಕಾಲದ ಬದಲಾಗಿ ರೂಪಿಸಿದ್ದು, ಈ ಸೇವೆ ಮನೆ ಬಾಗಿಲಿಗೆ ಬರಲಿದೆ. ಇದರಿಂದ ಸಾರ್ವಜನಿಕರು ಅನವಶ್ಯಕಕವಾಗಿ ಕಚೇರಿಗೆ ಅಲೆಯುವುದು ತಪ್ಪುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ಇರುವುದಿಲ್ಲ. ಇದು ರಾಷ್ಟ್ರದಲ್ಲಿ ಪ್ರಥಮವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಕೃಷ್ಣಮೂರ್ತಿ, ಶಿರಸ್ತೇದಾರ್ ರಮೇಶ್, ಮಾಜಿ ಯೋಧರ ಸಂಘದ ಮುಖಂಡರಾದ ಟಿ.ಪಿ. ಕೃಷ್ಣಪ್ಪ, ಧರಣೇಶ್, ಚಂದ್ರಣ್ಣ ಮುಂತಾದವರು ಹಾಜರಿದ್ದರು.