ಬೆಂಗಳೂರು: 2013ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು (ಪರಿಶಿಷ್ಟ ಜಾತಿಗೆ ಮೀಸಲು) ಕ್ಷೇತ್ರದಿಂದ ಕೊತ್ತೂರು ಜಿ. ಮಂಜುನಾಥ್ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಪರಿಶಿಷ್ಟ ಜಾತಿಗಳ ವರ್ಗಕ್ಕೆ ವಂಚಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಅರ್ಜಿದಾರರು (ಕೊತ್ತೂರು ಮಂಜುನಾಥ್) ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಕ್ಷೇತ್ರವನ್ನು ಕಸಿದುಕೊಂಡಿದ್ದಾರೆ. ಈ ಬೆಳವಣಿಗೆ ಸಂವಿಧಾನಕ್ಕೆ ಎಸಗಿದ ಮೋಸ ಎಂದು ನ್ಯಾ| ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ತಿಳಿಸಿದೆ.
ಆದರೆ ಪ್ರಸ್ತುತ ಕೋಲಾರ ಕ್ಷೇತ್ರದ ಶಾಸಕರಾಗಿರುವ ಮಂಜುನಾಥ್ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ತಿಳಿಸಿಲ್ಲ. 2021ರ ಅ.27ರಂದು ಜಿಲ್ಲಾ ಜಾತಿ ಪರಿಶೀಲನೆ ಸಮಿತಿ ವರದಿಯ ಸಿಂಧುತ್ವವನ್ನು ಪ್ರಶ್ನಿಸಿ ಮಂಜುನಾಥ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಜಿಲ್ಲಾ ಜಾತಿ ಪರಿಶೀಲನೆ ಸಮಿತಿಯ ವರದಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಮಂಜುನಾಥ್ ಪರಿಶಿಷ್ಟ ಜಾತಿಯ ಬುಡುಗ ಜಂಗಮ ಜಾತಿಗೆ ಸೇರಿದವರಲ್ಲ ಎಂದು ಜಾತಿ ಪರಿಶೀಲನೆ ಸಮಿತಿ ವರದಿ ನೀಡಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರದ ಗೆಜಿಟಿಯರ್‌ನಲ್ಲಿ ಬುಡಗ ಜಂಗಮ ಜಾತಿ ಯನ್ನು ಮಾಲಾನ್ಯಾಸಿ, ಭೈರಾಗಿ ಮುಂತಾದ ಹೆಸರು ಗಳಿಂದ ಕರೆಯಲಾಗು ತ್ತಿತ್ತು. ಆದರೆ ಅರ್ಜಿದಾರ ಮಂಜುನಾಥ್ ಸಂಬಂಧಿಕರು ಇತ್ತೀಚಿನ ದಿನಗಳಲ್ಲಿ ಬುಡಗ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿಲ್ಲ ಎಂದು ಜಿಲ್ಲಾ ಜಾತಿ ಪರಿಶೀಲನೆ ಸಮಿತಿಯ ತನಿಖೆಯಲ್ಲಿ ತಿಳಿದು ಬಂದಿತ್ತು.