Advertisement

Forest Land ಕಾಡು ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ: ಈಶ್ವರ ಖಂಡ್ರೆ

08:25 PM Sep 11, 2023 | Team Udayavani |

ಬೆಂಗಳೂರು: ಅರಣ್ಯವನ್ನು ಉಳಿಸಿ, ಬೆಳೆಸಬೇಕಾದದ್ದು ಪ್ರತಿಯೊಬ್ಬ ಅರಣ್ಯಾಧಿಕಾರಿಯ ಕರ್ತವ್ಯವಾಗಿದ್ದು, ಪ್ರಾಮಾಣಿಕವಾಗಿ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಬೇಕು. ಅರಣ್ಯ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಭೂಮಿ ಮರು ವಶ ಪಡಿಸಿಕೊಳ್ಳಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

Advertisement

ಬೆಂಗಳೂರಿನ ಅರಣ್ಯ ಭವನದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರೊಂದಿಗೆ ಪುಷ್ಪಗುತ್ಛ ಸಮರ್ಪಿಸಿದ ಬಳಿಕ ಅವರು ಅರಣ್ಯಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾಡು ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ. ಅರಣ್ಯ ಸಿಬ್ಬಂದಿ ಕಾಡು ಉಳಿಸಲು, ಕಾಡು ಮೃಗಗಳನ್ನು ಉಳಿಸಲು ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಪರಿಸರ ಪ್ರೇಮಿಗಳು ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲವನ್ನೂ ಮನಗಂಡು ನಾವು ಪ್ರಕೃತಿ ಪರಿಸರದ ರಕ್ಷಣೆಗೆ ಮುಂದಾಗಬೇಕು. ಅರಣ್ಯ ಮತ್ತು ನಗರ ಪ್ರದೇಶದಲ್ಲಿನ ಸಾಮಾಜಿಕ ಅರಣ್ಯಗಳ ಪ್ರದೇಶಗಳನ್ನು ರಕ್ಷಿಸಬೇಕು. ಇದನ್ನು ಅನ್ಯ ಉದ್ದೇಶಕ್ಕೆ ಬಳಕೆ ಆಗದಂತೆ ಎಚ್ಚರ ವಹಿಸಬೇಕು ಎಂದರು.

ವನ್ಯ ಮೃಗಗಳ ಚರ್ಮಕ್ಕಾಗಿ, ಉಗುರಿಗಾಗಿ, ದಂತಕ್ಕಾಗಿ ಕಳ್ಳಬೇಟೆ ನಡೆಯುತ್ತದೆ. ಮನುಷ್ಯನ ಸ್ವಾರ್ಥಕ್ಕಾಗಿ ನೂರಾರು ವರ್ಷಗಳ ಹಳೆಯ ಮರಗಳನ್ನು ಕಡಿದು ಅರಣ್ಯ ಭೂಮಿ ಒತ್ತುವರಿ ಮಾಡಲಾಗುತ್ತಿದೆ. ಇಂತಹ ಕಳ್ಳ ಬೇಟೆಗಾರರನ್ನು ನಿಗ್ರಹಿಸಲು, ಅರಣ್ಯ ಸಂಪತ್ತನ್ನು ರಕ್ಷಿಸಲು ಅರಣ್ಯ ಸಿಬ್ಬಂದಿ ಅವಿರತವಾಗಿ ಕಣ್ಣಾವಲು ಇಟ್ಟಿದ್ದಾರೆ. ಈ ಸಂರಕ್ಷಣೆಯ ಕಾರ್ಯದಲ್ಲಿ ಹಲವರು ಕಾಡುಗಳ್ಳರೊಂದಿಗೆ ನಡೆದ ಹೋರಾಟದಲ್ಲಿ ಬಲಿಯಾಗಿದ್ದಾರೆ.

ಅವರೆಲ್ಲರನ್ನೂ ಸ್ಮರಿಸಿ, ಅವರ ಕುಟುಂಬದ ಸದಸ್ಯರೊಂದಿಗೆ ಸರ್ಕಾರ ಸದಾ ಇರುತ್ತದೆ ಎಂಬ ಆತ್ಮಸ್ಥೆçರ್ಯ ತುಂಬುವುದು ಈ ಹುತಾತ್ಮರ ದಿನದ ಉದ್ದೇಶವಾಗಿದೆ ಎಂದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಅನ್ಯ ಕಾರ್ಯಕ್ರಮದ ನಿಮಿತ್ತ ತುರ್ತಾಗಿ ಮೈಸೂರಿಗೆ ನಿರ್ಗಮಿಸಿದರು. ಕಾರ್ಯಕ್ರಮದಲ್ಲಿ ವಸತಿ ಸಚಿವ ಜಮೀರ್‌ ಅಹ್ಮದ್‌, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್‌ ರಂಜನ್‌ ಮತ್ತಿತರರು ಪಾಲ್ಗೊಂಡಿದ್ದರು. ಮೃತ ಅರಣ್ಯ ಸಿಬ್ಬಂದಿ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.

ಒತ್ತುವರಿ ತೆರವು ವಿರೋಧಿಸಿ ದೂರು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆಯುತ್ತಿರುವ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಹಲವರು ಅರಣ್ಯ ಭವನಕ್ಕೆ ಬಂದು ಖಂಡ್ರೆ ಅವರನ್ನು ಭೇಟಿಯಾಗಿ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡರು. ಶಿಡ್ಲಘಟ್ಟದ ಕೆಲ ರೈತರು ನಮಗೆ ಸಾಗುವಳಿ ಪತ್ರ ನೀಡಿದ್ದರೂ, ಪೋಡಿ ಆಗಿದ್ದರೂ ಸಹ ಅರಣ್ಯ ಇಲಾಖೆಯವರು ಬಂದು ಅರಣ್ಯ ಜಮೀನು ಒತ್ತುವರಿ ಆಗಿರುವುದಾಗಿ ಆರೋಪಿಸಿ ನಮ್ಮ ಜಮೀನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಅರಣ್ಯ ಸಚಿವರಿಗೆ ದೂರು ನೀಡಿದರು. ಈ ಬಗ್ಗೆ ತಹಶೀಲ್ದಾರ್‌ ಮತ್ತು ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಮಾತನಾಡುವುದಾಗಿ ಈಶ್ವರ ಖಂಡ್ರೆ ಅವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next