Advertisement

ನಕಲಿ ಉಪನ್ಯಾಸಕನ ವಿರುದ್ಧ ಕ್ರಮಕ್ಕೆ ಮೀನಮೇಷ!

09:22 AM Jul 12, 2019 | Team Udayavani |

ಗದಗ: ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸಲ್ಲಿಸಿ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕರ ಹುದ್ದೆ ಗಿಟ್ಟಿಸಿಕೊಂಡಿದ್ದ ನಕಲಿ ಉಪನ್ಯಾಸಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಎರಡು ತಿಂಗಳು ಕಳೆದರೂ ಸಂಸ್ಥೆಯ ಆಡಳಿತ ಮಂಡಳಿ ಮಾತ್ರ ನೋಟಿಸ್‌, ವಿಚಾರಣೆ ನೆಪದಲ್ಲಿ ದಿನ ದೂಡುತ್ತಿದ್ದು, ಕ್ರಮಕ್ಕೆ ಮೀನಮೇಷ ಎಣಿಸುತ್ತಿದೆ.

Advertisement

ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಬೆಟಗೇರಿಯ ಆದರ್ಶ ಶಿಕ್ಷಣ ಸಮಿತಿಯ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ರವೀಂದ್ರಕುಮಾರ ಕುಲಕರ್ಣಿ ಅವರ ಬಿಇಡಿ ದಾಖಲೆಗಳು ನಕಲಿಯಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಈವರೆಗೆ ಸರಕಾರದಿಂದ ಪಡೆದ ವೇತನ ಮರು ಪಾವತಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು 15-05-2019ರಂದೇ ಆದೇಶಿಸಿದ್ದರೂ ಪ್ರಕರಣ ದಾಖಲಿಸಲು ಹಿಂದೇಟು ಹಾಕಲಾಗುತ್ತಿದೆ.

ಏನಿದು ಪ್ರಕರಣ?: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಸ್ನಾತಕೋತ್ತರ ಪದವಿಯೊಂದಿಗೆ ಬಿಇಡಿ ಪದವಿಯನ್ನೂ 2009ರಲ್ಲಿ ಕಡ್ಡಾಯಗೊಳಿಸಿತ್ತು. ಅದರಂತೆ 2014ರಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಬಿಇಡಿ ಪೂರ್ಣಗೊಳಿಸಿದವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆದರೆ, ಎಎಸ್‌ಎಸ್‌ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರ ಹುದ್ದೆಗೆ 2016ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ರವೀಂದ್ರಕುಮಾರ ಕುಲಕರ್ಣಿಗಿಂತ ಹೆಚ್ಚು ಅಂಕ ಗಳಿಸಿದವರು ಸಂದರ್ಶನದಲ್ಲಿ ಪಾಲ್ಗೊಂಡಿದ್ದರೂ, ಅವರನ್ನು ಕಡೆಗಣಿಸಲಾಗಿತ್ತು. ಇದರಿಂದ ಸಂಶಯಗೊಂಡ ಗಿರೀಶ್‌ ಎಸ್‌.ಕುಷ್ಟಗಿ ಎಂಬುವರು ಈ ಬಗ್ಗೆ 15-12-2018ರಂದು ಇಲಾಖೆಗೆ ದೂರು ಸಲ್ಲಿಸಿದ್ದರು.

ಕ್ರಿಮಿನಲ್ ಮೊಕದ್ದಮೆಗೆ ಸೂಚನೆ: ಉಪನ್ಯಾಸಕ ರವೀಂದ್ರಕುಮಾರ ಕುಲಕರ್ಣಿ ವಿರುದ್ಧ ದಾಖಲಾದ ದೂರಿನ ಹಿನ್ನೆಲೆಯಲ್ಲಿ ದಾಖಲೆಗಳ ನೈಜತೆ ಪರಿಶೀಲನೆಗೆ ಇಲಾಖೆ ಮುಂದಾಗಿದೆ. ರವೀಂದ್ರಕುಮಾರ ಕುಲ್ಕರ್ಣಿ ಅವರು ಉತ್ತರ ಪ್ರದೇಶದ ಜಾನ್ಸಿಯಲ್ಲಿರುವ ಬುಂದೇಲಖಂಡ ವಿಶ್ವವಿದ್ಯಾಲಯದಿಂದ ಬಿಇಡಿ ಪದವಿ ಪಡೆದಿದ್ದಾಗಿ ದಾಖಲೆ ಸಲ್ಲಿಸಿದ್ದರು. ಆದರೆ, ಈ ಕುರಿತು ಪರಿಶೀಲನೆ ನಡೆಸಿರುವ ಬುಂದೇಲಖಂಡ ವಿಶ್ವವಿದ್ಯಾಲಯವು ರವೀಂದ್ರಕುಮಾರ ಕುಲಕರ್ಣಿ ಅವರ ಬಿಇಡಿ ಪ್ರಮಾಣ ಪತ್ರ ನಕಲಿ ಎಂಬುದನ್ನು ದೃಢಪಡಿಸಿ ಪಪೂ ಇಲಾಖೆಗೆ ವರದಿ ನೀಡಿದೆ.

ಹೀಗಾಗಿ ಬಿ.ಇಡಿ ನಕಲಿ ಪ್ರಮಾಣ ಪತ್ರ ನೀಡಿ ಆಡಳಿತ ಮಂಡಳಿ, ಇಲಾಖೆ ಹಾಗೂ ಸರಕಾರಕ್ಕೆ ವಂಚಿಸಿರುವ ರವೀಂದ್ರ ಕುಮಾರ್‌ ಕುಲಕರ್ಣಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ನೇಮಕಗೊಂಡಾಗಿನಿಂದ ಈವರೆಗೆ ಪಡೆದ ವೇತನವನ್ನು ಮರು ವಸೂಲಿ ಮಾಡುವಂತೆ ಸ್ಪಷ್ಟವಾಗಿ ಸೂಚಿಸಿ, ಇಲಾಖೆಯ ಜಂಟಿ ನಿರ್ದೇಶಕರು 15-05-2019 ರಂದು ಆದೇಶ ಹೊರಡಿಸಿದ್ದಾರೆ.

Advertisement

ಸಂಸ್ಥೆಯ ಅನುದಾನಕ್ಕೆ ಕುತ್ತು?: ಜಂಟಿ ನಿರ್ದೇಶಕರ ಈ ಆದೇಶದಂತೆ ನಕಲಿ ಉಪನ್ಯಾಸಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ವೇತನ ವಸೂಲಿ ಮಾಡದೇ ರವೀಂದ್ರಕುಮಾರ ಕುಲಕರ್ಣಿಗೆ 17-6-2019 ರಂದು ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಅದಕ್ಕೆ ಅವರು ತಮ್ಮ ದಾಖಲೆಗಳನ್ನು ಸಮರ್ಥಿಸಿಕೊಂಡು ಉತ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ವಿಚಾರಣಾ ಸಮಿತಿ ರಚಿಸಲು ಮುಂದಾಗಿದೆ. ಆದರೆ, ಪಪೂ ಶಿಕ್ಷಣ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಇಲಾಖೆಯ ನಿರ್ದೇಶಕರ ಆದೇಶದಂತೆ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು. ಆದರೆ, ಮರು ವಿಚಾರಣೆ, ತನಿಖಾ ತಂಡ ರಚಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಸಂಸ್ಥೆಯ ಈ ನಡೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದರೆ, ಅನುದಾನ ಇಲ್ಲವೇ, ಅನುಮತಿಯೇ ರದ್ದುಗೊಳಿಸಬಹುದು ಎಂದು ಹೇಳಲಾಗಿದೆ.

 

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next