Advertisement
ಎಲ್‌ಇಡಿ ಲೈಟನ್ನು ಬಳಸದೇ ಬೆಳಕು ಮೀನುಗಾರಿಕೆ ಮಾಡಬಹುದು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದ್ದರೂ ಮಂಗಳೂರು ಮತ್ತು ಉಡುಪಿ ಮೀನುಗಾರಿಕೆ ಉಪನಿರ್ದೇಶಕರು ಯಾವುದೇ ರೀತಿಯ ಲೈಟನ್ನು ಉಪಯೋಗಿಸಬಾರದೆಂದು ಲಿಖೀತ ಆದೇಶ ನೀಡಿರುವ ಕಾರಣ ಬಹುತೇಕ ಪಸೀìನ್ ಮೀನುಗಾರ ಕಾರ್ಮಿಕರು ಮೀನುಗಾರಿಕೆ ಸ್ಥಗಿತಗೊಳಿಸಿ ನ್ಯಾಯಾಲಯದ ಆದೇಶಕ್ಕೆ ಕಾದು ಬಳಿಕ ತಮ್ಮ ಊರಿಗೆ ಮರಳಿದ್ದಾರೆ. ಈ ಮಧ್ಯೆ ಕೆಲವು ಪರ್ಸಿನ್ ಬೋಟಿನವರು ತಮ್ಮ ಕಾರ್ಮಿಕರನ್ನು ಉಳಿಸಿಕೊಳ್ಳುವುದಕ್ಕಾಗಿ ಆಗಾಗ ಮೀನುಗಾರಿಕೆಗೆ ತೆರಳುತಿದ್ದರೇ ವಿನಾ ಬೆಳಕು ಮೀನುಗಾರಿಕೆ ನಡೆಸಿಲ್ಲ ಎಂದು ಸಂಘವು ತಿಳಿಸಿದೆ. ಪರ್ಸಿನ್ ಮತ್ತು ಆಳಸಮುದ್ರ ಮೀನುಗಾರರ ಮಧ್ಯೆ ಉಂಟಾದ ಸಮಸ್ಯೆಯನ್ನು ಪರಿಹರಿಸುವಲ್ಲಿ ಮಲ್ಪೆ ಮೀನುಗಾರರ ಸಂಘದ ಮುಖೇನ ಇದುವರೆಗೂ ಯಾವುದೇ ಸಂಧಾನವಾಗಿಲ್ಲವೆಂದು ಯಶೋಧರ ಅಮೀನ್ ತಿಳಿಸಿದ್ದಾರೆ.
ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಪರ್ಸಿನ್ ಮತ್ತು ಆಳಸಮುದ್ರ ಮೀನುಗಾರಿಕೆಯ ನಡುವೆ ಇಬ್ಬಗೆಯ ನೀತಿ ತೋರುತ್ತಿದ್ದಾರೆ. ಈಗಾಗಲೇ ಬೆಳಕು ಮೀನುಗಾರಿಕೆಗಾಗಿ ಪರಿವರ್ತನೆ ಮಾಡಿದ ಎಲ್ಲ ಬೋಟುಗಳನ್ನು ಸರಕಾರ ವಶಪಡಿಸಿಕೊಂಡು, ಅವುಗಳ ಮೇಲಿರುವ ಸಾಲ ಮತ್ತು ಈವರೆಗಿನ ನಷ್ಟವನ್ನು ಮೀನುಗಾರರಿಗೆ ಭರಿಸಬೇಕು ಎಂದು ಪರ್ಸಿನ್ ಮೀನುಗಾರರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ನೀಡಿ ಆಗ್ರಹಿಸಿದರು. ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್, ನವೀನ್ ಕೋಟ್ಯಾನ್, ರಾಮ ಸುವರ್ಣ, ನವೀನ್ ಸುವರ್ಣ, ಮಧು ಕರ್ಕೇರ, ಸಂತೋಷ್ ಸಾಲ್ಯಾನ್, ಚಂದ್ರಕಾಂತ್ ಪುತ್ರನ್, ವಿಶ್ವನಾಥ್ ಉಪಸ್ಥಿತರಿದ್ದರು. ಆರೋಪಗಳೇನು?
ಡೀಪ್‌ಸೀ ಟ್ರಾಲ್‌ಬೋಟಿನವರು 500 ಅಶ್ವಶಕ್ತಿಯ ಎಂಜಿನ್‌ಬಳಸಿ, 35ಎಂ.ಎಂ. ಕೊಡೆಂಟ್ ಬಲೆಯನ್ನು ಉಪಯೋಗಿಸದೇ 10ರಿಂದ 50 ಟನ್ ವರೆಗೆ ಮರಿಮೀನನ್ನು (ಚಲ್ಟ್) ಹಿಡಿದು ತಂದು ಮೀನಿನ ಗೊಬ್ಬರಕ್ಕಾಗಿ ಮಾರಾಟ ಮಾಡುತ್ತಿದ್ದಾರೆ. 5ರಿಂದ 10 ಕೆವಿ ಜನರೇಟರನ್ನು ಬೋಟಿನ ಕ್ಯಾಬಿನಿನೊಳಗೆ ಇಟ್ಟು ಬೆಳಕು ಮೀನುಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಇಲಾಖಾಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಯಶೋಧರ ಅಮೀನ್ ಆರೋಪಿಸಿದ್ದಾರೆ.