ತುಮಕೂರು: ಕೋವಿಡ್-19 ಸೋಂಕು ಹರಡದಂತೆ ಜಾರಿಯಲ್ಲಿರುವ ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ವರ್ತಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ ನೀಡಿದರು.
ನಗರದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಬೆಳೆದಂತಹ ತರಕಾರಿ, ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಎಪಿಎಂಸಿಗೆ ತರುವ ಸಮಯದಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಹಾಗೂ ಪೊಲೀಸರಿಂದ ಅಡಚಣೆ ಉಂಟಾಗಬಾರದೆಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಂಬಂಧಿಸಿದವರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ರಾಜ್ಯದ ಕೆಲವು ಕಡೆ ಚೆಕ್‌ಪೋಸ್ಟ್‌ಗಳಲ್ಲಿ ರೈತರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ರೈತರು ಯಾವುದೇ ಬೆಳೆ ಬೆಳೆಯಲಿ, ಮಾರಕಟ್ಟೆಗೆ ತಂದು ಮಾರಾಟ ಮಾಡಲು ಯಾವುದೇ ರೀತಿ ಸಮಸ್ಯೆಯಾಗಬಾರದು. ರೈತರಿಂದ ಖರೀದಿಸಿ ಹಣ್ಣು, ತರಕಾರಿಯನ್ನು ವರ್ತಕರು ತಮಗಿಷ್ಟ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಾಟ ಮಾಡಲು ಬರುವ ಪ್ರತಿಯೊಬ್ಬ ರೈತರಿಗೂ ಕಡ್ಡಾಯವಾಗಿ ಮಾಸ್ಕ್ ವಿತರಣೆ, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರೂ ಸಹ ಸಹಕರಿಸಬೇಕೆಂದು ಮನವಿ ಮಾಡಿದರು. ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಾವಗಡ ತಾಲೂಕಿನ ರೈತರು ತಮ್ಮ ಬೆಳೆಯನ್ನು ಎಪಿಎಂಸಿಗೆ ತರಲು ಸಮಸ್ಯೆ ಯಾಗುತ್ತಿದೆ. ಆಂಧ್ರದ ಪೊಲೀಸರು ಜಿಲ್ಲೆಗೆ ಪ್ರವೇಶಿಸಲು ಅಡ್ಡಿಯುಂಟು ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಸ್ಪಂದಿಸಿದ ಸಚಿವರು ಎಪಿಎಂಸಿ ಯಲ್ಲಿ ಮಾರಾಟ ಮಾಡುವ ಎಲ್ಲ ರೈತರಿಗೂ ಕೃಷಿ ಇಲಾಖೆಯಿಂದ ಪಾಸ್ ನೀಡಲಾಗತ್ತಿದ್ದು, ಅಂತರ ರಾಜ್ಯಗಳಲ್ಲೂ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿರುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದರು.
ಇದಕ್ಕೂ ಮುನ್ನ ಸಚಿವರು ಸೋಂಕು ನಿವಾರಕ ಘಟಕದೊಳಗಿನಿಂದ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿ ವರ್ತಕರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಬಾಳೆಹಣ್ಣು ಅಂಗಡಿ ವ್ಯಾಪಾರಿಯೊಬ್ಬರು ಲಾಕ್‌ಡೌನ್ ಗಿಂತ ಮುನ್ನ ವ್ಯಾಪಾರವಾದಷ್ಟು ಆಗುತ್ತಿಲ್ಲ. ವ್ಯಾಪಾರವಾಗದ ಬಾಳೆಹಣ್ಣನ್ನು ದೇವರಾಯನಗದುರ್ಗದ ನಾಮದ ಚಿಲುಮೆ ಯಲ್ಲಿ ಕೋತಿಗಳಿಗೆ ನೀಡಲಾಗುತ್ತಿದೆ. ಲಾಕ್ ಡೌನ್‌ನಿಂದ ಹಣ್ಣು-ತರಕಾರಿಗಳ ಬೆಲೆ ಕುಸಿದಿದ್ದು, ರೈತರು ಹಾಗೂ ವರ್ತಕರಿಗೆ ನಷ್ಟ ಉಂಟಾಗುತ್ತಿದೆ ಎಂದು ಅಳಲನ್ನು ತೋಡಿಕೊಂಡರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಸಿಕೃಷ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಿ.ಆರ್.ಪುಷ್ಪ, ಮಾಜಿ ಸಚಿವ ಸೊಗಡು ಎಸ್.ಶಿವಣ್ಣ ಇದ್ದರು.