ಬೆಂಗಳೂರು: ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಸದನದ ಅತ್ಯಂತ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅಥವಾ ಆರ್.ವಿ.ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಆಯ್ಕೆ ವಿಚಾರ ಇತ್ಯರ್ಥವಾಗುತ್ತಿದ್ದಂತೆ ನೂತನ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಂಗಾಮಿ ಸ್ಪೀಕರ್ ನೇಮಕ ಮಾಡುವುದು ಸದನದ ವಾಡಿಕೆ. ಸಾಮಾನ್ಯವಾಗಿ ಸದನದ ಅತಿ ಹಿರಿಯ ಶಾಸಕರನ್ನು ಈ ಹುದ್ದೆಗೆ ನೇಮಕ ಮಾಡಲಾಗುತ್ತದೆ.
ಇದಾದ ಬಳಿಕ ಅಧಿಕೃತವಾಗಿ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸಾಮಾನ್ಯವಾಗಿ ಈ ಹುದ್ದೆಗೆ ಪಕ್ಷದ ಹಿರಿಯರು, ಸಂಸದೀಯ ನಡಾವಳಿಯಲ್ಲಿ ಹಿಡಿತ ಹೊಂದಿರುವವರು, ಕಾನೂನು ಹಾಗೂ ಸಂಸದೀಯ ಸಚಿವರಾಗಿ ಕೆಲಸ ಮಾಡಿದವರು, ಸದನದ ಮೇಲೆ ಒಟ್ಟಾರೆಯಾಗಿ ಹಿಡಿತ ಸಾಧಿಸಬಲ್ಲವರನ್ನು ನೇಮಿಸಲಾಗುತ್ತದೆ.
ಹೀಗಾಗಿ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್ ಅಥವಾ ಟಿ.ಬಿ.ಜಯಚಂದ್ರ ನೇಮಕ ಸಾಧ್ಯತೆ ಇದೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಕೃಷ್ಣ ಭೈರೇಗೌಡ ಅವರನ್ನು ಸ್ಪೀಕರ್ ಮಾಡುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.