ಬೆಂಗಳೂರು: ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು. ಸಮಯಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ. ಜಿಲ್ಲೆಯಲ್ಲಿ ನೀವು ಯಾವ ರೀತಿ ಹೆಜ್ಜೆ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯವಾದುದು. ಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಆ ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.
ನೀವು ಆಡಳಿತದ ಭಾಗವಾಗಿದ್ದೀರಿ. ನಿಮಗೆ ಹೆಚ್ಚಿನ ಅಧಿಕಾರವೂ ಇದೆ. ನೀವು ಕೈಗೊಳ್ಳುವ ನಿರ್ಣಯಗಳು ಆಡಳಿತ ನಿರ್ವಹಣೆಯಲ್ಲಿ ಬಹಳ ಮುಖ್ಯ ಎಂದು ತಿಳಿಸಿದರು. ಯಾವುದೇ ಕೆಲಸ ಮಾಡಬಾರದು ಅಂದುಕೊಂಡರೆ, 101 ಕಾರಣ ದೊರೆಯುತ್ತದೆ. ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ ಒಂದೇ ಕಾರಣ ಸಾಕು. ಆದ್ದರಿಂದ ಸಕಾಲಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಆಡಳಿತ ನೀಡಬೇಕು. ಸಮಸ್ಯೆಗಳಿದ್ದರೆ, ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಿರಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ದಾಸನದೊಡ್ಡಿಯ ಕೆರೆಕಟ್ಟೆಗಳ ನಿರ್ಮಾತೃ ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು ಇನ್ನಿಲ್ಲ
ಇಂದಿನ ಸಭೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಮುಕ್ತವಾಗಿ ತಮ್ಮ ಅನುಭವ ಹಂಚಿಕೊಳ್ಳಬೇಕು. ಆಗ ಸರ್ಕಾರ ಸೂಕ್ತ ನಿರರ್ಧಾರಗಳನ್ನು ಕೈಗೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿದೆ. ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಧಿಸುವಂತೆ ಸೂಚಿಸಿದರು.
ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ವಿ. ಸುನಿಲ್ ಕುಮಾರ್, ಸಿ.ಸಿ. ಪಾಟೀಲ್, ವಿ.ಸೋಮಣ್ಣ, ಬಿ.ಶ್ರೀರಾಮುಲು, ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.