ಕೋಲಾರ: ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆ, ಬಿರುಗಾಳಿಯಿಂದಾಗಿ ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಯಾಗಿದ್ದು, ತಾಲೂಕಿನ ಕೋರಗಂಡನಹಳ್ಳಿ, ಕೋನೇಪುರ ರೈತರ ವಿವಿಧ ತೋಟಗಳಿಗೆ ಸಂಸದ ಎಸ್. ಮುನಿಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋರಗಂಡನಹಳ್ಳಿ, ಕೋನೇಪುರದ ರೈತರಾದ ನಾಗೇಶ್ ಅವರಿಗೆ ಸೇರಿದ 1 ಎಕರೆಯಲ್ಲಿನ ಕೋಸು, ನಾಗರಾಜ್ ಅವರ 1 ಎಕರೆ ಬೀನ್ಸ್, ಮಂಜು ಎಂಬುವರ ಆಲೂಗಡ್ಡೆ, ರಮೇಶ್ ಎಂಬುವರ ಟೊಮಟೋ ತೋಟಗಳನ್ನು ವೀಕ್ಷಿಸಿದರು. ಬೆಳೆ ಹಾನಿಯಾಗಿ 3-4 ದಿನಗಳಾಗಿದ್ದರೂ, ಅಧಿಕಾರಿಗಳು ಈವರೆಗೂ ಸ್ಥಳ ಪರಿಶೀಲನೆಗೆ ಆಗಮಿಸಿಲ್ಲವೆಂದು ಇದೇ ವೇಳೆ ಸಂಸದರಿಗೆ ಅಲ್ಲಿನ ರೈತರು ತಿಳಿಸಿದರು.
ಹಾನಿಯಾದ ಪ್ರದೇಶ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎಸ್. ಮುನಿಸ್ವಾಮಿ, ಆರು ತಾಲೂಕುಗಳಿಂದ 2,600 ಹೆಕ್ಟೇರ್ ಮಾವಿನ ಬೆಳೆ ನಾಶವಾಗಿದೆ. ಕೋಸು, ಜೋಳ, ಹೂವು, ಆಲೂಗಡ್ಡೆ, ಟೊಮೆಟೋ, ಬೀನ್ಸ್ ಬೆಳೆಗೂ ಹಾನಿ ಉಂಟಾಗಿದೆ ಎಂದು ತಿಳಿಸಿದರು.
ಸರ್ಕಾರ ರೈತರ ಪರವಾಗಿದೆ: ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ನಷ್ಟಕ್ಕೆ ಪರಿಹಾರ ಭರಿಸುವ ಕೆಲಸವನ್ನು ಶೀಘ್ರದಲ್ಲೇ ಮಾಡಲಿದ್ದೇವೆ. ದಯವಿಟ್ಟು ರೈತರು ವಿಮೆ ಮಾಡಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಮಾ.16ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಸಾವಿರಾರು ರೈತರಿಗೆ ನಷ್ಟ ಉಂಟಾಗಿದೆ. ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ ಎಂದರು.
ರೈತರಿಂದ ಮಾಹಿತಿ ಪಡೆದು ಅಂದಾಜು ಸಮೀಕ್ಷೆ : ಅಧಿಕಾರಿಗಳನ್ನು ಕಳುಹಿಸಿ ಸಮೀಕ್ಷೆ ನಡೆಸಲು ಸೂಚಿಸಿದ್ದೆ. ರೈತರಿಂದ ಮಾಹಿತಿ ಪಡೆದು ಅಂದಾಜು ಸಮೀಕ್ಷೆ ತಯಾರಿಸಿದ್ದಾರೆ. ಅಕಾಲಿಕ ಮಳೆಯಿಂದ ಹಾನಿ ಆಗಿದ್ದರೆ ಎನ್‌ಡಿಆರ್‌ಎಫ್‌ನಡಿ 1 ಹೆಕ್ಟೇರ್ ಬೆಳೆಗೆ 22 ಸಾವಿರ ನೀಡುತ್ತಾರೆ. ತರಕಾರಿಗೆ ನಷ್ಟ ವಾಗಿದ್ದರೆ ಎಕರೆಗೆ 18 ಸಾವಿರವರೆಗೆ ಸಿಗಲಿದೆ. ಜತೆಗೆ ಬೆಳೆ ನಷ್ಟ ವಾದವರು ಫಸಲ್ ಬಿಮಾ ಯೋಜನೆಯಡಿ 4,600 ಮಂದಿ ವಿಮೆ ಮಾಡಿಸಿದ್ದು, ಅವರಿಗೆ ಎಕರೆಗೆ ಕನಿಷ್ಟ 88 ಸಾವಿರವರೆಗೆ ಪರಿಹಾರ ಸಿಗಲಿದೆ ಎಂದರು. ಚುನಾವಣೆ ಸಮೀಪಿಸಿರುವುದರಿಂದ ಸದ್ಯದಲ್ಲೇ ನೀತಿ ಸಂಹಿತೆ ಜಾರಿಯಾಗಲಿದೆ. ಹಾಗಾಗಿ ತಡ ಮಾಡದೆ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ, ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿ: ಸಿದ್ದರಾಮಯ್ಯ ಯುಟರ್ನ್ ಹೊಡೆಯುತ್ತಾರೆ ಎಂದು ಹಿಂದೆಯೇ ಹೇಳಿದ್ದೆ. ಕೋಲಾರದವರು ಬುದ್ಧಿವಂತರು. ಇಲ್ಲಿರುವುದು ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಾತ್ರ ಪೈಪೋಟಿ. ಕಾಂಗ್ರೆಸ್ ಬೂತ್‌ಗಳಲ್ಲಿ ಏಜೆಂಟರೇ ಇಲ್ಲ. ಕಾಂಗ್ರೆಸ್‌ನಲ್ಲಿ ನಾಲ್ಕೈದು ತಂಡಗಳಿರುವುದು ವರಿಷ್ಠರಿಗೆ ಮನವರಿಕೆ ಆಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ವಿಚಾರವಾಗಿ ಗೊಂದಲವಿದೆ. ಅವರಲ್ಲೇ ಜಗಳವಿರುವುದರಿಂದಾಗಿ ಸಿದ್ದರಾಮಯ್ಯ ವಾಪಸ್ ಹೋಗಿದ್ದಾರೆ ಎಂದ ಅವರು, ಕೋಲಾರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬೆಗ್ಲಿ ಸಿರಾಜ್, ರಘು, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
ಸಿಎಂ ಆಗಿದ್ದವರಿಂದ ಕ್ಷೇತ್ರಕ್ಕೆ ಪರದಾಟ: ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಒಂದು ಕ್ಷೇತ್ರ ಹುಡುಕಿಕೊಳ್ಳಲು ಇಷ್ಟೊಂದು ಪರಿತಪಿಸಬೇಕೇ, ಜೋಳಿಗೆ ಕಟ್ಟಿಕೊಂಡು ತಿರುಗಾಡಬೇಕೇ? ಬೇರೆಲ್ಲೂ ಸಲ್ಲದವರು ಕೋಲಾರದಲ್ಲಿ ಸಲ್ಲುವರೇ ಎಂದು ಸಂಸದ ಎಸ್. ಮುನಿಸ್ವಾಮಿ ಲೇವಡಿ ಮಾಡಿ, ಪ್ರಶ್ನಿಸಿದರು.