Advertisement
ಬೆಂಗಳೂರು: ಭೂರಮೆಯ ಮಡಿಲ ಆಳದಲ್ಲಿ ಬೇರಿನ ಮೂಲಕ ನೀರು ಹೀರಿ ಬೆವರಿನಲ್ಲಿ ಬೆಂದ ಮಂದಿಗೆ ತನ್ನ ಹಸಿರೆಲೆಗಳ ಮೂಲಕ ತಣ್ಣನೆಯ ತಂಗಾಳಿ ಹೂರಸೂಸುವ ಗಿಡಮರಗಳು ಇದೀಗ “ದ್ರಾವಣ ದಾಳಿ’ಯ ಭೀತಿಗೆ ಸಿಲುಕಿವೆ. “ಉದ್ಯಾನನಗರಿ’ ಎಂಬ ಖ್ಯಾತಿ ಇರುವ ಬೆಂಗಳೂರಿನಲ್ಲಿ ಮನೆ ಸೌಂದರ್ಯಕ್ಕೆ ಮರ ಅಡ್ಡಿ, ಮನೆ ವಾಸ್ತು ಪ್ರಕಾರ ವೃಕ್ಷ ಅಡ್ಡಿ ಎಂದು ಮರದ ಒಡಲಿಗೆ ರಾಸಾಯಿನಿಕ ದ್ರಾವಣ (ಆ್ಯಸಿಡ್) ಸೇರಿಸಿ ಸದ್ದಿಲ್ಲದೆ ಸಾಯಿಸುವ ಕೆಲಸ ನಡೆದಿದೆ.
Related Articles
Advertisement
ಕಾಂಪೌಂಡ್ ಒಳಗೆ ಎಲೆ ಉದುರಿಸುತ್ತಿದೆ ಎಂಬ ಕಾರಣಕ್ಕೆ ಕೃತ್ಯ: ಜಯನಗರದ 4ನೇ ಬ್ಲಾಕ್‌ನಲ್ಲಿ ಕೂಡ ಕೆಲ ತಿಂಗಳ ಹಿಂದಷ್ಟೇ ಮರದ ಬುಡಕ್ಕೆ ಆ್ಯಸಿಡ್ ದಾಳಿ ನಡೆದಿತ್ತು. ಇದು ಸಹಜ ಸಾವು ಎಂಬ ರೀತಿಯಲ್ಲಿ ಬಿಂಬಿಸುವ ಯತ್ನ ಕೂಡ ಆಗಿತ್ತು. ನಂತರ ಆ್ಯಸಿಡ್ ದಾಳಿಯ ಹಿಂದಿನ ಕೃತ್ಯ ಬಯಲಾಗಿತ್ತು. ಮನೆ ಆವರಣಕ್ಕೆ ಉದುರಿದ ಎಲೆಗಳು ಬೀಳುತ್ತವೆ ಎಂಬ ಉದ್ದೇಶದಿಂದ ಮರದ ಮೇಲೆ ರಾಸಾಯನಿಕ ದಾಳಿ ನಡೆದಿತ್ತು. ಪಾಲಿಕೆಯ ಮರ ಸಂರಕ್ಷಣಾ ತಂಡ ಮತ್ತು ಮರ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಆ ಮರವನ್ನು ಸಂರಕ್ಷಣೆ ಮಾಡುವಲ್ಲಿ ಸಫಲವಾಗಿತ್ತು.
ವಿಜಯನಗರದಲ್ಲಿ ವಾಸ್ತು ದೋಷ ಕಾರಣ: ವಿಜಯನಗರದಲ್ಲಿ 2015ರಲ್ಲಿ ಮರಕ್ಕೆ ವಿಷವುಣಿಸುವ ಕಾರ್ಯ ನಡೆದಿತ್ತು. ಮನೆ ಮುಂಭಾಗದಲ್ಲಿದ್ದ ನೇರಳೆ ಹಣ್ಣಿನ ಮರ ವಾಸ್ತು ದೋಷಕ್ಕೆ ಅಡ್ಡಿಯಾಗಿದೆ ಎಂದು ಮರದ ತೊಗಟೆಯ ಸುತ್ತ ಆಳವಾದ ಡ್ರೀಲ್ (ಹೋಲ್) ಮಾಡಿ ವಿಷಯುಕ್ತ ರಾಸಾಯನಿಕ ಮರದ ಒಡಲಿಗೆ ತುಂಬುವ ಕೃತ್ಯ ನಡೆದಿತ್ತು. ಸ್ಥಳೀಯ ಶಾಸಕರ ನೆರವಿನಿಂದಾಗಿ ಪರಿಸರ ಪ್ರೇಮಿಗಳು ಆ ಮರಕ್ಕೆ ಮತ್ತೆ ಮರುಜೀವ ನೀಡಿದ್ದಾರೆ. ಇದೀಗ ಆ ಮರಕ್ಕೆ ಹೊಸ ಜೀವ ಬಂದಿದ್ದು ನೆರಳಿನ ಜತೆಗೆ, ಹಣ್ಣೂ ನೀಡುತ್ತಿದೆ.
ಜಾಹೀರಾತು ಕಾಣಿಸುತ್ತಿಲ್ಲ ಎಂದು ಮರಕ್ಕೆ ಆ್ಯಸಿಡ್ ಹಾಕಿದ ಕೀಚಕರು : ಐದಾರು ವರ್ಷಗಳ ಹಿಂದೆ ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿ ವಾರ್ಡ್‌ನ ಚಿನ್ನಪ್ಪನಹಳ್ಳಿ ಬಳಿಯ ಕಲಾಮಂದಿರ ಸರ್ವೀಸ್ ರಸ್ತೆ ಬದಿಯಲ್ಲಿರುವ ಜಾಹೀರಾತು ಫಲಕಗಳು ರಸ್ತೆಗೆ ಕಾಣುವುದಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಗಳು 17 ಹೂವರಸಿ ಮರಗಳಿಗೆ ಆ್ಯಸಿಡ್ ದಾಳಿ ನಡೆಸಿದ್ದರು. ಇದರಲ್ಲಿ 14 ಮರ ಸಂಪೂರ್ಣ ಒಣಗಿದ್ದು, ಮೂರು ಮಾತ್ರ ಚಿಕಿತ್ಸೆಗೆ ಸ್ಪಂದಿ ಸುತ್ತಿವೆ. ಈಗ ಅವು ಹೂಬಿಟ್ಟು ಕಂಗೊಳಿಸುತ್ತಿವೆ. ಮರಗಳನ್ನು ಕೊಲ್ಲಲು ವಿಷ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಜಾಹೀರಾತು ಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಮರಗಳಿಗೆ ಆ್ಯಸಿಡ್ ಚುಚ್ಚುತ್ತಿರುವ ಅಪರಾಧಿಗಳ ವಿರುದ್ಧ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ನಗರದ ಆರ್‌ಟಿಐ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿದ್ದು ಭಾರೀ ಸುದ್ದಿಯಾಗಿತ್ತು.
ಮನೆ ಸೌಂದರ್ಯಕ್ಕೆ ಅಡ್ಡಿ ಎಂದು ಮರಕ್ಕೆ ವಿಷ ಹಾಕಿದ ವೈದ್ಯ: ರಸ್ತೆ ಬದಿಯಲ್ಲಿರುವ ಮರಗಳನ್ನು ಮನೆ ಸೌಂದರ್ಯಕ್ಕೆ ಅಡ್ಡಿಯಾಗಿವೆ ಎಂಬ ಕಾರಣಕ್ಕೆ ವಿಷವುಣಿಸುವ ಕೃತ್ಯ ನಡೆಯುತ್ತಿದೆ. ಹೆಣ್ಣೂರು, ರಾಜರಾಜೇಶ್ವರಿ ನಗರದಲ್ಲಿ ಮನೆ ಸೌಂದರ್ಯಕ್ಕೆ ಮರ ಅಡ್ಡಿಯಾಗಿದೆ, ಹೊರಗಡೆ ನೋಟ ಕಾಣಸಿಗುತ್ತಿಲ್ಲ ಎಂಬ ಕಾರಣಕ್ಕೆ ಆ್ಯಸಿಡ್ ದಾಳಿ ನಡೆದಿತ್ತು. ಬೇಜಾರಿನ ಸಂಗತಿ ಅಂದರೆ ಆ್ಯಸಿಡ್ ಹಾಕಿದ ವ್ಯಕ್ತಿ ಸರ್ಕಾರಿ ವೈದ್ಯ ಎಂದು ಮರ ತಜ್ಞರು ಹೇಳುತ್ತಾರೆ.
ಒಂದು ಮರದ ಎಲೆ ಒಬ್ಬ ಮನುಷ್ಯ ಐದು ನಿಮಿಷ ಉಸಿರಾಡುವಷ್ಟೇ ಆಮ್ಲಜನಕ ನೀಡುತ್ತದೆ. ಜತೆಗೆ ತಂಪಾದ ನೆರಳು ಹಣ್ಣು-ಹಂಪಲುಗಳನ್ನು ಕೂಡ ನೀಡುತ್ತದೆ. ಅಷ್ಟಾದರೂ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಕ್ಕೆ ವಿಷವುಣಿ ಸುತ್ತಿರುವುದು ಹೇಯ ಕೃತ್ಯ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕು. -ಯಲ್ಲಪ್ಪ ರೆಡ್ಡಿ, ಹಿರಿಯ ಪರಿಸರವಾದಿ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಕಾರಣಗಳಿಗೆ ಮರಗಳಿಗೆ ಆ್ಯಸಿಡ್‌ಹಾಕುವ ಕೆಲಸ ನಡೆದಿದೆ. ವಾಸ್ತು, ಜಾಹೀರಾತು ಮಾμಯಾ, ಇತರೆ ಕಾರಣಗಳು ಇದರಲ್ಲಿ ಸೇರಿದೆ. ಹತ್ತು ವರ್ಷಗಳಲ್ಲಿ ನಾನು 100ಕ್ಕೂ ಅಧಿಕ ಮರಗಳನ್ನು ರಕ್ಷಣೆ ಮಾಡಿದ್ದೇನೆ. ಭಾರತೀಯ ರೆಲ್ಲರೂ ಪರಿಸರ ಪೂಜೆಸುವ ವರು. ಹೀಗಾಗಿ ಯಾರೂ ಮರಕ್ಕೆ ವಿಷವುಣಿಸುವ ಕೆಲಸ ಮಾಡಬೇಡಿ. – ವಿಜಯ್ ನಿಶಾಂತ್, ಮರ ವೈದ್ಯ
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕೋಟೆ “ಸಿ’ ಬೀದಿ ಯಲ್ಲಿ ನಡೆದ ಮರ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. -ಹರೀಶ್, ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿ.