ಬೆಂಗಳೂರು: ತಾಯಿ ಹಾಗೂ ಆಕೆಯ ಎರಡು ವರ್ಷದ ಮಗಳ ಮೇಲೆ ಆ್ಯಸಿಡ್ ಹಾಕಿದ್ದ ಪ್ರಕರಣದ ಆರೋಪಿಗೆ ವಿಚಾರಣ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದುಪಡಿಸಿದ ಹೈಕೋರ್ಟ್, ಆರೋಪಿಯನ್ನು ಮರಳಿ ಜೈಲಿಗೆ ಹಾಕುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ವಿಚಾರಣ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದ್ದ ಆದೇಶ ರದ್ದುಪಡಿಸಲು ಕೋರಿ ಸಂತ್ರಸ್ತ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಆರೋಪಿಯ ಜಾಮೀನು ರದ್ದುಪಡಿಸಿ ಆದೇಶಿಸಿದೆ.
ಅಲ್ಲದೇ, ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸಿ ಇತ್ಯರ್ಥಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. ಆರೋಪಿಯನ್ನು ಕೂಡಲೇ ವಶಕ್ಕೆ ಪಡೆದು ಜೈಲಿಗೆ ಕಳಹಿಸುವಂತೆ ಕಡಬ ಠಾಣೆ ಪೊಲೀಸರಿಗೆ ನಿರ್ದೇಶಿಸಿದೆ.
ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು
ಸಂತ್ರಸ್ತ ಮಹಿಳೆಯು ಆರೋಪಿಯ ಸ್ವಂತ ನಾದಿನಿ. ಹಣದ ವಿಚಾರಕ್ಕೆ ಆಕೆಯನ್ನು ಗುರಿಯಾಗಿಸಿಕೊಂಡು ಕಿರುಕುಳ ಕೊಡುತ್ತಿದ್ದ. ಲೈಂಗಿಕ ದೌರ್ಜನ್ಯಕ್ಕೂ ಯತ್ನಿಸಿದ್ದ. ಪತಿಯನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆಸಿರುವುದು ಗಂಭೀರ ಸ್ವರೂಪದ ಕೃತ್ಯ. ಇಂತಹ ಗಂಭೀರ ಪ್ರಕರಣದ ಬಗ್ಗೆ ವಿಚಾರಣ ನ್ಯಾಯಾಲಯ ದೃಷ್ಟಿ ಕಳೆದುಕೊಂಡಂತೆ ವರ್ತಿಸಿದೆ. ಆರೋಪಿ ವಿಚಾರಣೆಯಿಂದ ತಲೆ ಮರೆಸಿಕೊಂಡು ಹೋಗುವ ಸಾಧ್ಯತೆಯಿಲ್ಲ ಎಂಬ ಕಾರಣದಿಂದಲೇ ಜಾಮೀನು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಆರೋಪಿಯ ಜಾಮೀನು ಆದೇಶ ರದ್ದುಪಡಿಸಿತು.