ಕುಷ್ಟಗಿ: ತಾಲೂಕಿನ ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲ ಹಿಂಗಾರು ಹಂಗಾಮಿಗೆ “ಪುಲೆ ಯಶೋಧಾ ತಳಿ ಜೋಳ’ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ| ಎಂ.ಡಿ. ಕಾಚಾಪೂರ ಅವರು ಉತ್ತರ ಕರ್ನಾಟಕದ ಮುಂಗಾರು-ಹಿಂಗಾರು ದೇಶಿ ಜೋಳದ ತಳಿ ಅಧ್ಯಯನ ಸಂದರ್ಭದಲ್ಲಿ ಮಾಲ್ದಂಡಿ ಬಿಳಿಜೋಳದಿಂದ ಅಭಿವೃದ್ಧಿ ಪಡಿಸಿದ ಪುಲೆ ಯಶೋಧಾ ಹೆಸರಿನ ಬಿಳಿಜೋಳ ತಳಿಯ ಬಿತ್ತನೆ ಬೀಜವನ್ನು ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲರಿಗೆ ನೀಡಿದ್ದರು.
ಈ ಪ್ರದೇಶದಲ್ಲಿ ಮೊದಲ ಬಾರಿ ಪುಲೆ ಯಶೋಧ ವಿಶೇಷ ತಳಿ ಬಿಳಿ ಜೋಳ ಉತ್ತಮವಾಗಿ ಬೆಳೆಸಿರುವುದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಖುದ್ದು ಭೇಟಿ ನೀಡಿ ವೀಕ್ಷಿಸಿದ್ದರು. ರೈತ ಶರಣಗೌಡ ಮಾಲಿಪಾಟೀಲ ಕಳೆದ ವರ್ಷ ನಾಲ್ಕು ಎಕರೆ ಎರೆಭೂಮಿಯಲ್ಲಿ ಪುಲೆ ಯಶೋಧಾ ಬಿಳಿ ಜೋಳ ಬೆಳೆದಿದ್ದರು. ಈ ಬಾರಿಯೂ ಒಂದು ಎಕರೆಯಲ್ಲಿ ಬೆಳೆದಿದ್ದಾರೆ.
5-6 ಅಡಿ ಎತ್ತರ ಬೆಳೆಯುವ ಈ ತಳಿ ಇತರೇ ದೇಶಿ ಜೋಳಕ್ಕಿಂತ ತೆನೆಯ ಗಾತ್ರ ಹೆಚ್ಚು. ಎಕರೆಗೆ ಸರಿ ಸುಮಾರು 7ರಿಂದ 8 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದಾಗಿದೆ. ಈ ಬೆಳೆಯ ಸೊಪ್ಪು (ಕಣಕಿ) ಒಣಗಿದರೂ ಮಿದುವಾಗಿದ್ದು, ಜಾನುವಾರುಗಳಿಗೆ ತಿನ್ನುವಾಗ ಸಿಬಿರು ಚುಚ್ಚಲ್ಲ. ಈ ಹಿನ್ನೆಲೆಯಲ್ಲಿ ಜಾನುವಾರುಗಳು ಈ ದಂಟನ್ನು ಬಿಡದೇ ತಿನ್ನುತ್ತವೆ ಎನ್ನುತ್ತಾರೆ ರೈತ ಶರಣಗೌಡ ಮಾಲಿಪಾಟೀಲ.
ತಾಲೂಕಿನ ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಮಾಲ್ದಂಡಿ, ನಿಡಶೇಸಿ ಭಾಗದ ಗಟ್ಟಿ ತೆನೆ ಜೋಳ, ಯಕ್ಕರನಾಳ ಜೋಳ ಸೇರಿದಂತೆ ದೇಶಿ ತಳಿಯ ಬೆಳೆ ಬೆಳೆಯಲಾಗುತ್ತಿದೆ. ಆದರೆ ಗುಮಗೇರಾದ ರೈತ ಶರಣಗೌಡ ಮಾಲಿಪಾಟೀಲ 10 ವರ್ಷದಿಂದ ಪುಲೆ ಯಶೋಧಾ ಜೋಳ ಬಿಟ್ಟರೆ ಇನ್ಯಾವುದು ತಳಿ ಜೋಳ ಬೆಳೆದಿಲ್ಲ. ಪ್ರತಿ ವರ್ಷ ತಪ್ಪದೇ ಬೆಳೆಯುವ ಇವರು ಪುಲೆ ಯಶೋಧಾ ಜೋಳದಿಂದ ಉತ್ತಮ ಇಳುವರಿ ಪಡೆದಿದ್ದಾರೆ. ಈ ತಳಿಯ ಬಿತ್ತನೆ ಬೀಜಗಳನ್ನು ಯಾರಾದ್ರೂ ಬಿತ್ತನೆ ಮಾಡಲು ಮುಂದೆ ಬಂದರೆ ಉಚಿತವಾಗಿ ನೀಡಲಾಗುವುದು. ಒತ್ತಾಯಪೂರ್ವಕವಾಗಿ ಬಿತ್ತನೆ ಬೀಜ ಕೊಡಲು ಮನಸ್ಸು ಒಪ್ಪಲ್ಲ ಎನ್ನುತ್ತಾರೆ ಶರಣಗೌಡ ಮಾಲಿಪಾಟೀಲ.
ಪುಲೆ ಯಶೋಧಾ ತಳಿ ಮಾಲ್ದಂಡಿ ಮೂಲ ದೇಶಿ ತಳಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಮಹಾರಾಷ್ಟ್ರ ಹಾಗೂ ಧಾರವಾಡ, ಬೆಳಗಾವಿಯಲ್ಲಿ ಅಲ್ಲಲ್ಲಿ ಈ ತಳಿ ಬೆಳೆಯಲಾಗುತ್ತಿದೆ. ಆದರೆ ಈ ಪ್ರದೇಶದಲ್ಲೂ ಬೆಳೆಯಬಹುದಾಗಿದ್ದು, ಕಾಳುಗಳು ದಪ್ಪವಾಗಿರುತ್ತವೆ.
–ಡಾ|ಎಂ.ಬಿ. ಪಾಟೀಲ,ಕೃಷಿ ಸಂಶೋಧನಾ ಕೇಂದ್ರ ಕೊಪ್ಪಳ.
-ಮಂಜುನಾಥ ಮಹಾಲಿಂಗಪುರ