Advertisement

ಕುಂಚ ಹಿಡಿದು ದಾಖಲೆ ಬರೆದ ಕನ್ನಡತಿ

06:45 PM Mar 09, 2021 | Team Udayavani |

ಕಲೆಗೆ ದೇಶ, ಭಾಷೆಗಳ ಗಡಿಯಿಲ್ಲ. ಕಲಿಕೆ ವಯಸ್ಸಿನ ಅಳತೆಗೋಲಿಲ್ಲ ಎಂಬ ಮಾತಿಗೆ ಅದ್ಭುತ ನಿದರ್ಶನ ವೀಣಾ ದೇವಗಿರಿ.

Advertisement

ಕರ್ನಾಟಕ ಜಿಲ್ಲೆಯ ಹತ್ತಿ, ಶೇಂಗಾ ಮಾರುಕಟ್ಟೆಗೆ ಹೆಸರುವಾಸಿಯಾದ ರಾಣೆಬೆನ್ನೂರು ವೀಣಾ ದೇವಗಿರಿ ಅವರ ತವರೂರು. ಪ್ರಸಿದ್ಧ ಛಾಯಾಚಿತ್ರಗ್ರಾಹಕ ಕೃಷ್ಣಮೂರ್ತಿ ಪಾಟೀಲ್‌ ಅವರ ದ್ವಿತೀಯ ಪುತ್ರಿ, ದೇವಗಿರಿ ಮನೆತನದ ವಾಸುದೇವ್‌ ದೇವಗಿರಿ ಅವರ ಪತ್ನಿ.

ಸ್ಥಳದಲ್ಲಿ ಕಂಡ ದೃಶ್ಯವನ್ನು ಯಥಾವತ್ತಾಗಿ ಚಿತ್ರಿಸುವ ನಿಷ್ಣಾತ ಕಲಾವಿದರಾದ ಕೃಷ್ಣ ಮೂರ್ತಿ ಪಾಟೀಲ್‌ ಅವರಿಗೆ ಆಗಿನ  ದಿನಗಳಲ್ಲಿ  ಕಪ್ಪು- ಬಿಳುಪಿನ  ವ್ಯಕ್ತಿ ಚಿತ್ರಗಳನ್ನು ದೊಡ್ಡ ದೊಡ್ಡ  ಕ್ಯಾನ್ವಾಸ್‌  ಮೇಲೆ ಬಣ್ಣಗಳನ್ನು  ಉಪಯೋಗಿಸಿ ಕುಂಚದಿಂದ ಚಿತ್ರ ಬಿಡಿಸುವ  ಕಲೆ ಸಿದ್ಧಿಸಿತ್ತು.  ತಂದೆಯ  ಕಲೆಯನ್ನು  ವರದಾನವಾಗಿ ಪಡೆದವರು ವೀಣಾ ದೇವಗಿರಿ.

ಸಣ್ಣ ವಯಸ್ಸಿನಿಂದಲೂ ಚಟುವಟಿಕೆಯ  ಚಿಲುಮೆಯಾಗಿದ್ದ  ಇವರು  ಮನೆಯಲ್ಲಿ ತಿಳಿಸದೇ  ಶಾಲೆಯ  ವಾರ್ಷಿಕೋತ್ಸವದ ನಿಮಿತ್ತ  ನಡೆಯುವ  ಆಟೋಟ ಸ್ಪರ್ಧೆಗಳು, ಚಿತ್ರಕಲಾ ಸ್ಪರ್ಧೆ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನದೊಂದಿಗೆ ಮನೆಗೆ ಬರುತ್ತಿದ್ದ ಉತ್ಸಾಹಿ ಬಾಲಕಿ. ಯೋಗಾಭ್ಯಾಸ, ಎತ್ತರ, ಉದ್ದ ಜಿಗಿತ ಮತ್ತು  ಓಟದ  ಸ್ಪರ್ಧೆಗಳಲ್ಲೂ  ಪ್ರಥಮ ಬಹುಮಾನ  ತಮ್ಮದಾಗಿಸಿಕೊಳ್ಳುತ್ತಿದ್ದರು. ತಂದೆಯಿಂದ ಸಿಕ್ಕ ಪ್ರೋತ್ಸಾಹ, ಸಲಹೆಗಳನ್ನು ಸ್ವೀಕರಿಸಿದ ವೀಣಾ ದೇವಗಿರಿ ಕಾಲೇಜು  ದಿನಗಳಲ್ಲಿ  ರಾಣೇಬೆನ್ನೂರಿನಲ್ಲಿ  ಮೊಟ್ಟ  ಮೊದಲಿಗೆ  ಸೈಕಲ್‌  ಓಡಿಸಿದ  ದಿಟ್ಟ  ಯುವತಿ.

18ನೇ ವಯಸ್ಸಿಗೆ ವಾಸುದೇವ್‌ ದೇವಗಿರಿ ಅವರೊಂದಿಗೆ ಸಪ್ತಪದಿ ತುಳಿದ ವೀಣಾ ಅವರು ಇಬ್ಬರು ಮಕ್ಕಳ ತಾಯಿಯಾಗಿ, ಮನೆವಾರ್ತೆಯಲ್ಲೇ ತೊಡಗಿಕೊಂಡಿದ್ದಾಗ ದಿನಗಳಲ್ಲಿ  ಪತಿಗೆ  ದೂರದ ದುಬಾೖಯಲ್ಲಿ ಕೆಲಸ  ಸಿಕ್ಕಾಗ ದೇಶ ಬಿಟ್ಟು ಹೊರಡಲೇಬೇಕಾಯಿತು. ಬಳಿಕ ಪದೋನ್ನತಿ ಪಡೆದ ಪತಿಯೊಂದಿಗೆ ದುಬೈಯಿಂದ  ಬಾಂಗ್ಲಾದೇಶದ  ಢಾಕಾಕ್ಕೆ ಹಿಂಬಾಲಿಸಿದರು. ಪತಿ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ತೆರಳಿದ ಅನಂತರ ಸಮಯ ಕಳೆಯುವುದು ದುಸ್ತರವಾಯಿತು. ಈ ವೇಳೆ ಅವರಲ್ಲಿ ಅಡಗಿದ್ದ ಸುಪ್ತ ಕಲೆ ಎಚ್ಚೆತ್ತು ನಿಂತಿತು.

Advertisement

ಢಾಕಾದಲ್ಲಿ  ಫೈನ್‌ ಆರ್ಟ್ಸ್ನಲ್ಲಿ ಡಿಪ್ಲೊಮಾ ಪದವಿ ಪಡೆದ ವೀಣಾ ದೇವಗಿರಿ ಅವರು ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಮತ್ತೆ ದುಬೈಗೆ ವರ್ಗಾವಣೆಯಾದಾಗ ಅಲ್ಲಿ ಅವರಿಗೆ ಭಾಗ್ಯದ ಬಾಗಿಲು ತೆರೆಯಿತು.

ದುಬೈಯ ಪ್ರಖ್ಯಾತ ಶಾಲೆಯಲ್ಲಿ ಕಲಾ ಶಿಕ್ಷಕಿಯಾಗಿ 19 ವರ್ಷ ಸೇವೆ ಸಲ್ಲಿಸಿ  ನಿವೃತ್ತರಾಗಿರುವ ಇವರ ಕಾರ್ಯಕ್ಕೆ ಎರಡು ಬಾರಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ.

ಮಕ್ಕಳಿಬ್ಬರೂ ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿದಾಗ ಮತ್ತೆ ಏನಾದರೂ ಸಾಧಿಸಬೇಕೆಂಬ ಹಂಬಲ ಗರಿಗೆದರಿತ್ತು. ಸಮಯದ ಸದುಪಯೋಗ ಪಡಿಸಿಕೊಂಡು ಕಲೆಗೆ ಸಂಬಂಧಿಸಿ ಆರ್ಟ್‌ ಥೆರಪಿ ಕೋರ್ಸ್‌ ಮತ್ತು ಡಿಪ್ಲೊಮಾ ಇನ್‌ ಕೌನ್ಸೆಲಿಂಗ್‌ ಕೋರ್ಸ್‌ ಪಡೆದರು. ಇದರೊಂದಿಗೆ ದುಬಾೖ, ಶಾರ್ಜಾ ಅಲ್ಲದೇ ಭಾರತ ಸೇರಿದಂತೆ ಸುಮಾರು 20 ಸ್ಥಳಗಳಲ್ಲಿ ಕಲಾ ಪ್ರದರ್ಶನ ನಡೆಸಿದ್ದಾರೆ.

ಲತಾ ಜೋಶಿ ಅವರ ಜೀವನ ಜೋಕಾಲಿ ಕಿರು ಕಾದಂಬರಿಯ  ಮುಖಪುಟ  ವಿನ್ಯಾಸವನ್ನು  ಗ್ರಾಮೀಣ  ಸೊಗಡಿನ  ಕಲೆಯಲ್ಲಿ  ಸುಂದರವಾಗಿ  ಚಿತ್ರಿಸಿಕೊಟ್ಟು  ಜನಮನ್ನಣೆಯನ್ನು  ಗಳಿಸಿರುವ ವೀಣಾ  ದೇವಗಿರಿ ಅವರು  ಬರಹದಲ್ಲಿ  ಬಳಸಲ್ಪಡುವ ಅಲ್ಪವಿರಾಮ, ಪೂರ್ಣ ವಿರಾಮ, ಉದ್ಘಾರ ವಾಚಕ, ಪ್ರಶ್ನೆ ಗುರುತುಗಳು ಮತ್ತು  ಬ್ರಾಕೆಟ್‌ ಚಿಹ್ನೆಗಳನ್ನು  ವಿನ್ಯಾಸವನ್ನಾಗಿ ಬಳಸಿದ  ಅವರ  ವಿಶಿಷ್ಟ  ವಿನ್ಯಾಸ  ಪರಿಕಲ್ಪನೆಯ  ಕಲೆಯು  ಐnಛಜಿಚ ಚಿಟಟk ಟf rಛಿcಟ್ಟಛs ನಲ್ಲಿ ದಾಖಲೆಯಾಗಿದೆ. ಜತೆಗೆ ಈ  ಸುಂದರ  ಪರಿಕಲ್ಪನೆಯನ್ನು  ಪುಸ್ತಕ ರೂಪದಲ್ಲಿ  ಹೊರ ತರುವ ಚಿಂತನೆಯನ್ನೂ ನಡೆಸಿದ್ದಾರೆ.

ಮಂತ್ರಾಲಯ ಪರಿಮಳಾ ಪ್ರಶಸ್ತಿಗೂ ಆಯ್ಕೆಯಾಗಿರುವ ವೀಣಾ ದೇವಗಿರಿ ಅವರು ಬೆಂಗಳೂರಿನಲ್ಲಿ  ಮಾ. 7ರಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ.  ಕಲಾರಾಧಕಿಯಾಗಿ ವೀಣಾ ದೇವಗಿರಿ ಅವರು ಶಿರಡಿ ಸಾಯಿಬಾಬಾ ಅವರ ಪರಮ ಭಕ್ತೆಯೂ ಹೌದು. ಪ್ರತೀವರ್ಷ  ತಪ್ಪದೇ ಶಿರಡಿಗೆ ಹೋಗುತ್ತಾರೆ. ಅಲ್ಲದೇ ದೀಪಾವಳಿ ಹಬ್ಬದಂದು ನೂರಾರು ಕನ್ನಡಿಗರನ್ನು ಮನೆಗೆ ಆಮಂತ್ರಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಿಹಿ ಅಡುಗೆಯನ್ನು ಉಣಬಡಿಸಿ, ಮಡಿಲಕ್ಕಿ ತುಂಬಿ, ಉಡುಗೊರೆ ಕೊಟ್ಟು ಕಳುಹಿಸುವ ಸತ್ಸಂಪ್ರದಾಯವನ್ನು ದುಬಾೖ ನೆಲದಲ್ಲಿ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ. ಇದರೊಂದಿಗೆ ಮಣ್ಣಿನ ಗಣೇಶನ ಸ್ಥಾಪನೆ, ವಿಸರ್ಜನೆ ಮೊದಲಾದ ಧಾರ್ಮಿಕ  ಹಬ್ಬಗಳನ್ನು ಆಚರಿಸಿ ತಮ್ಮ ದೇಶದ  ಸಂಸ್ಕೃತಿಯನ್ನು  ಹೊರದೇಶದಲ್ಲೂ ಕಾಪಾಡಿಕೊಂಡಿದ್ದಾರೆ.

ಕ್ರಾಫ್ಟ್ ಮಾದರಿಯನ್ನೇ ಬಳಸಿ ಮಕ್ಕಳಿಗೆ ಚಿತ್ರಕಲೆಯನ್ನು ಕಲಿಸುವ  ವೀಣಾ ದೇವಗಿರಿ ಅವರು ಈವರೆಗೆ ಸುಮಾರು 400 ಚಿತ್ರಗಳನ್ನು ರಚಿಸಿದ್ದು, ಪ್ರಸ್ತುತ “ಕುಂಚೋದ್ಭವ ಭಾರತ ಸಂಸ್ಕೃತಿ’  ಕುಂಚದಲ್ಲಿ ಭಾರತೀಯ ಸಂಪೂರ್ಣ ಸಂಸ್ಕೃತಿ ಯನ್ನು ತೋರಿಸುವ ಸಲುವಾಗಿ  ಕಲಾ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ, ಸಮ್ಮಾನ, ಪ್ರಶಸ್ತಿಗಳು ಬರಲಿ ಮೊದಲಿಗೆ ತಂದೆಯನ್ನು ಸ್ಮರಿಸುವ ಇವರು ಕನ್ನಡ ನಾಡಿನ ಹಿರಿಮೆಯನ್ನು  ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಹೆಮ್ಮೆಯ  ಸಾಧಕಿ.

ವಸ್ತು ಪ್ರದರ್ಶನ  ಮಳಿಗೆಯಂತಿದೆ ಮನೆ :

ದುಬಾೖಯಲ್ಲಿರುವ ಇವರ ಮನೆಯೇ ಒಂದು ವಸ್ತು ಪ್ರದರ್ಶನದಂತಿದೆ. ಅತ್ಯುತ್ತಮ  ಮರಗಳ ಕಟ್ಟಿಗೆ, ತಾಮ್ರ, ಬೆಳ್ಳಿ, ಹಿತ್ತಾಳೆಯೊಂದಿಗೆ ಚಿನ್ನದಿಂದ  ತಯಾರಿಸಲಾದ ಸಾವಿರಾರು ಆನೆಯ ವಿಗ್ರಹಗಳ ದೊಡ್ಡ ಪ್ರಮಾಣದ ಸಂಗ್ರಹವೇ ಇವರಲ್ಲಿದೆ. ಉಗುರಿನಷ್ಟು ಚಿಕ್ಕ ಗಾತ್ರದಿಂದ ಹಿಡಿದು ಸುಮಾರು 25 ಕೆ.ಜಿ. ಗಾತ್ರದ  ಆನೆಗಳ ಸಂಗ್ರಹ  ವಿಶೇಷವಾಗಿದೆ.

 

ವಿಭಿನ್ನ ಬಗೆಯ  ಕಲಾಕೃತಿಗಳು ಇವರ ಮನೆಯ ಗೋಡೆ, ಮೂಲೆ,  ಮೇಜು, ಶೆಲ್ಫ್ ಮತ್ತು ನೆಲದ ಮೇಲೂ ಅಚ್ಚುಕಟ್ಟಾಗಿ ಅಲಂಕರಿಸಿವೆ. ಇವರ ಕುಂಚದಿಂದ ಮೂಡಿಬಂದ ದೇವತೆಗಳ ಆಳೆತ್ತರದ  ಚಿತ್ರ ಪಟಗಳು  ಅಂದವಾದ ಚೌಕಟ್ಟಿನಲ್ಲಿ  ಕಣ್ಮನ ಸೆಳೆಯುವಂತಿವೆ.

 

-ಲತಾ ಜೋಶಿ ಬ್ಯಾಡಗಿ

Advertisement

Udayavani is now on Telegram. Click here to join our channel and stay updated with the latest news.

Next