Advertisement

ಸಾಧನೆಯ ಹೆಜ್ಜೆಗಳು… 

03:36 PM Jul 30, 2018 | |

ಮನಸ್ಸೊಂದಿದ್ದರೆ ಸಾಕು ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಅನೇಕ ಮಹಿಳೆಯರಿದ್ದಾರೆ. ಪುರುಷರೇ ಪ್ರಭುತ್ವ ಸಾಧಿಸಿದ್ದ ಕ್ಷೇತ್ರಗಳಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡಿರುವ ಮಹಿಳೆಯರಿಂದು ಪುರುಷ ಪ್ರಧಾನ ಕ್ರೀಡೆಗಳಲ್ಲೂ ಮಿಂಚುತ್ತಿದ್ದಾರೆ. ಅತ್ಯಂತ ಕಠಿನ ಕ್ರೀಡೆಗಳೆಂದೇ ಖ್ಯಾತಿ ಪಡೆದಿರುವ ಶೂಟರ್‌, ಬಾಕ್ಸಿಂಗ್‌, ಕುಸ್ತಿ, ವೈಟ್‌ಲಿಫ್ಟಿಂಗ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮಾಡುತ್ತಿರುವ ಸಾಧನೆ ನೋಡಿದರೆ ಕಠಿನ ಪರಿಶ್ರಮದೊಂದಿಗೆ ಗುರಿ ಸಾಧನೆಯ ಛಲವಿದ್ದರೆ ಸಾಕು ಬದುಕಿನಲ್ಲಿ ಎಂತಹ ಕಠಿನ ಸವಾಲುಗಳನ್ನು ಎದುರಿಸಬಹುದು ಎಂಬುದಕ್ಕೆ ಸಾಕ್ಷಿಯಾದಂತಿದೆ.

Advertisement

ಶೂಟಿಂಗ್‌ ಸ್ಪೋರ್ಟ್ಸ್
ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ ಸ್ಪೋರ್ಟ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಬಂದದ್ದು 2012ರಲ್ಲಿ. ಇದರಲ್ಲಿ ಪಾಲ್ಗೊಂಡಿದ್ದ 11 ಮಂದಿಯಲ್ಲಿ ಮೊತ್ತ ಮೊದಲ ಬಾರಿಗೆ 4 ಮಹಿಳಾ ಶೂಟರ್‌ ಗಳು ಪಾಲ್ಗೊಂಡಿದ್ದೇ ವಿಶೇಷ. ಹೀನಾ ಸಿಂಧು, ಮನು ಭಾಖೇರ್‌, ತೇಜಸ್ವಿನಿ ಸಾವಂತ್‌, ಶ್ರೀಯಾಸಿ ಸಿಂಗ್‌ ಶೂಟರ್‌ ಗಳು ಈಗ ಹೆಚ್ಚು ಚರ್ಚೆಯಲ್ಲಿದ್ದಾರೆ. ಕಾರಣ ಇವರ ಸಾಧನೆಯ ಹಾದಿ.

ಹೀನಾ ಸಿಂಧು
ಮುಂಬಯಿಯಲ್ಲಿ 1989ರಲ್ಲಿ ಜನಿಸಿದ ಹೀನಾ ಸಿಂಧು ದಂತ ಚಿಕಿತ್ಸೆಯಲ್ಲಿ ಬ್ಯಾಚುಲರ್‌ ಡಿಗ್ರಿ ಪಡೆದಿದ್ದಾರೆ. ಇವರ ಪತಿ ರೋನಕ್‌ ಪಂಡಿತ್‌ ಸಹಿತ ತಂದೆ ಹಾಗೂ ಸಹೋದರ ಶೂಟರ್‌ ಆಗಿದ್ದರಿಂದ ಹೀನಾ ಸಿಂಧುವಿಗೆ ಶೂಟರ್‌ ಆಗುವುದು ಹೆಚ್ಚು ಕಷ್ಟವೆನಿಸಲಿಲ್ಲ. 2006ರಿಂದ ಶೂಟಿಂಗ್‌ ಸ್ಪೋರ್ಟ್ಸ್ ನಲ್ಲಿ ಪಾಲ್ಗೊಳ್ಳಲು ತರಬೇತಿ ಪಡೆಯಲಾರಂಭಿಸಿದ ಹೀನಾ, ಬೀಜಿಂಗ್‌ ನಲ್ಲಿ
ನಡೆದ ಐಎಸ್‌ ಎಸ್‌ ವರ್ಲ್ಡ್  ಕಪ್‌ ನಲ್ಲಿ ಮೊದಲ ಬೆಳ್ಳಿ ಪದಕ ಪಡೆದರು. ಕೇರಳದಲ್ಲಿ ನಡೆದ ರಾಷ್ಟ್ರೀಯ ಪಂದ್ಯದಲ್ಲಿ 10ಎಂ ಏರ್‌ ಪಿಸ್ತೂಲ್‌ ಇವೆಂಟ್‌ ನಲ್ಲಿ ಪ್ರಥಮ ಸ್ಥಾನ  ಪಡೆದ ಮಹಿಳೆ ಎಂದೆನಿಸಿಕೊಂಡರು. 2010ರಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ನಲ್ಲೂ ಬೆಳ್ಳಿ ಪದಕ ಪಡೆದ ಹೀನಾ, ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಚಿನ್ನದ ಪದಕ ವಿಜೇತರಾದರು. 2012ರಲ್ಲಿ ಬೇಸಗೆ ಒಲಿಂಪಿಕ್ಸ್‌ಗೆ ಪ್ರವೇಶ ಪಡೆದು ಅಲ್ಲಿ ಎಲ್ಲ ಸುತ್ತಿನ ಸ್ಪರ್ಧೆಯಲ್ಲೂ ಪಾಲ್ಗೊಂಡ ಖ್ಯಾತಿ ಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. 2013ರಲ್ಲಿ ಐಎಸ್‌ಎಸ್‌ಎಫ್ ನ ವರ್ಲ್ಡ್ ಕಪ್‌ ನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದಾರೆ. ವರ್ಲ್ಡ್ ಕಪ್‌ ನಲ್ಲಿ ತಲಾ 2 ಚಿನ್ನ, ಬೆಳ್ಳಿ ಪದಕ, ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲೂ ತಲಾ 2 ಚಿನ್ನ, ಬೆಳ್ಳಿ ಪದಕ, ಏಷ್ಯನ್‌ ಗೇಮ್ಸ್‌ ನಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚು, ಕಾಮನ್‌ ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಒಂದು ಚಿನ್ನ, ಏಷ್ಯನ್‌ ಚಾಂಪಿಯನ್‌ ಶಿಪ್‌ನಲ್ಲಿ ತಲಾ ಒಂದು ಚಿನ್ನ ಮತ್ತು ಕಂಚಿನ ಪದಕ ಪಡೆದು 2014ರ ಎಪ್ರಿಲ್‌ 7ರಂದು ನ್ಪೋರ್ಟ್ಸ್ ನಲ್ಲಿ ನಂ. 1 ಪಟ್ಟಕ್ಕೇರಿದರು. ಅರ್ಜುನ ಪ್ರಶಸ್ತಿಯನ್ನೂ ಪಡೆದಿರುವ ಇವರ ಪ್ರಯಾಣದ ದಾರಿ ಕಠಿನವಾಗಿದ್ದರೂ ಎಲ್ಲೂ ಸೋಲೊಪ್ಪಿಕೊಳ್ಳದೆ ಮುನ್ನಡೆದು ಬಂದು ಸಾಧಕರ ಸಾಲಿನಲ್ಲಿ ನಿಂತಿದ್ದಾರೆ.

ಮನು ಭೇಕರ್‌
2002ರಲ್ಲಿ ಹರಿಯಾಣದಲ್ಲಿ ಜನಿಸಿದ ಮನು ರಾಮ್‌ ಕಿಶನ್‌ ಭೇಕರ್‌ ಅತಿ ಸಣ್ಣ ವಯಸ್ಸಿನಲ್ಲೇ ಶೂಟಿಂಗ್‌ ನಲ್ಲಿ ಬಹು ದೊಡ್ಡ ಸಾಧನೆ ಮಾಡಿದವರು. ಐಎಸ್‌ ಎಸ್‌ ಎಫ್ ವರ್ಲ್ಡ್ ಕಪ್‌ ಮತ್ತು ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಚಿನ್ನದ ಪದಕ ಪಡೆದ ಇವರ ಆರಂಭ ತಂದೆಯ ಹೂಡಿಕೆಯ ಹಣ 1.50 ಲಕ್ಷ ರೂ. ನಿಂದ ಆಗಿತ್ತು.

ಮೊದಲ ಬಾರಿಗೆ 2017 ಏಷ್ಯನ್‌ ಜೂನಿಯರ್‌ ಚಾಂಪಿ ಯನ್‌ಶಿಪ್‌ ನಲ್ಲಿ ಬೆಳ್ಳಿ ಪದಕ ಗೆದ್ದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಎಲ್ಲರೂ ಗುರುತಿಸುವಂತಾಯಿತು. ಕೇರಳದಲ್ಲಿ 2017ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭೇಕರ್‌ 9 ಚಿನ್ನದ ಪದಕ ಗೆದ್ದರು. ಇಲ್ಲಿ ವಿಶ್ವ ಕಪ್‌ ವಿಜೇತೆ ಹೀನಾ ಸಿಂಧುವನ್ನು ಸೋಲಿಸಿರುವುದು ಮಾತ್ರವಲ್ಲ ಸಿಂಧು ಅವರ 240.8 ಅಂಕಗಳ ದಾಖಲೆಯನ್ನು ಮುರಿದು ಫೈನಲ್‌ ನಲ್ಲಿ 242.3 ಅಂಕ ಗಳಿಸಿದರು. ಅಷ್ಟೇ ಅಲ್ಲದೇ ಭೇಕರ್‌ 2018ರಲ್ಲಿ ನಡೆದ ವಿಶ್ವಕಪ್‌ ನಲ್ಲಿ ಚಿನ್ನದ ಪದಕ ಗೆದ್ದ ಅತಿ ಕಿರಿಯ ಭಾರತೀಯರೆನಿಸಿಕೊಂಡರು.

Advertisement

ತೇಜಸ್ವಿನಿ ಶಾವಂತ್‌
2011ರಲ್ಲಿ ಅರ್ಜುನ ಪ್ರಶಸ್ತಿ ಗೆದ್ದ ತೇಜಸ್ವಿನಿ ಶಾವಂತ್‌ ಮಹಾರಾಷ್ಟ್ರದ ಕೊಲ್ಹಾಪುರದವರು. 2004ರಲ್ಲಿ ನಡೆದ 9ನೇ ಸೌತ್‌ ಏಷ್ಯನ್‌ ನ್ಪೋರ್ಟ್ಸ್ ಫೆಡರೇಶನ್‌ ಗೇಮ್ಸ್‌ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ತೇಜಸ್ವಿನಿ ಅವರ ಶೂಟಿಂಗ್‌ ಸ್ಪೋರ್ಟ್ಸ್ ಪ್ರಯಾಣ ಯಶಸ್ವಿಯಾಗಿ ಇಲ್ಲಿಂದ ಪ್ರಾರಂಭಗೊಂಡಿತ್ತು. ವರ್ಲ್ಡ್ ಚಾಂಪಿಯನ್‌ ಶಿಪ್‌ನಲ್ಲಿ 1, ಕಾಮನ್‌ವೆಲ್ತ್‌ ನಲ್ಲಿ 3 ಚಿನ್ನದ ಪದಕ ಸಹಿತ ಮೂರು ಬೆಳ್ಳಿ, ಒಂದು ಕಂಚು ಗೆದ್ದ ಇವರು, ವರ್ಲ್ಡ್ ಕಪ್‌ ನಲ್ಲಿ ಕಂಚಿನ ಪದಕವನ್ನೂ ತಮ್ಮದಾಗಿಸಿಕೊಂಡಿದ್ದಾರೆ. 2016ರಲ್ಲಿ ಉದ್ಯಮಿ ಸುನೀಲ್‌ ದರೇಕರ್‌ ಅವರನ್ನು ವಿವಾಹವಾದ ಅನಂತರವೂ ತಮ್ಮ ಕಾರ್ಯಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಅವರಲ್ಲಿ ಹೆಚ್ಚಿನ ಸಾಧನೆಯ ಹುಮ್ಮಸ್ಸು ಇರುವುದನ್ನು ತೋರಿಸಿದೆ.

ಶ್ರೇಯಾಸಿ ಸಿಂಗ್‌
ಹೊಸದಿಲ್ಲಿಯಲ್ಲಿ 1991ರಲ್ಲಿ ಜನಿಸಿದ ಶ್ರೇಯಾಸಿ ಸಿಂಗ್‌ ಡಬಲ್‌ ಟ್ರಾಪ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಶೂಟರ್‌. 2018ರ ಕಾಮನ್‌ ವೆಲ್ತ್‌ ನಲ್ಲಿ ಚಿನ್ನದ ಪದಕ ಮತ್ತು 2014ರ ಕಾಮನ್‌ ವೆಲ್ತ್‌ ನಲ್ಲಿ ಸ್ವಿಲರ್‌ ಪದಕ ವಿಜೇತೆ. ಏಷ್ಯನ್‌ ಗೇಮ್ಸ್‌ ನಲ್ಲಿ ಕಂಚು, ಕಾಮನ್‌ ವೆಲ್ತ್‌ ಚಾಂಪಿಯನ್‌ ಶಿಪ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿರುವ ಶ್ರೇಯಾಸಿ ಸಿಂಗ್‌ ಅಜ್ಜ ಮತ್ತು ತಂದೆ ದೇಶದ ರೈಫ‌ಲ್‌ ಅಸೋಸಿಯೇಶನ್‌ ನಲ್ಲಿ ಅಧ್ಯಕ್ಷರಾಗಿದ್ದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಕಠಿನ ಪರಿಶ್ರಮದಿಂದಲೇ ಇವತ್ತು ಸಾಧಕರೆನಿಸಿಕೊಂಡಿದ್ದಾರೆ.

ವೈಟ್‌ಲಿಫ್ಟಿಂಗ್ ನ ಸಾಧಕರಿವರು
ವೈಟ್‌ ಲಿಫ್ಟಿಂಗ್ (ಭಾರ ಎತ್ತುವ ಸ್ಪರ್ಧೆ)ನಲ್ಲೂ ಮಹಿ ಳೆ ಯರೂ ಮುಂಚೂಣಿಯಲ್ಲಿದ್ದಾರೆ. ಈ ಸಾಲಿನಲ್ಲಿ ಸಾಯಿ ಕೋಮ್‌ ಮೀರಾಬಾಯಿ ಚಾಹ್ನು , ಕೆ. ಸಂಜಿತಾ ಚಾಹ್ನು , ಪೂನಂ ಯಾದವ್‌ ಈಗ ಅಗ್ರಸ್ಥಾನದಲ್ಲಿದೆ. 48 ಕೆ.ಜಿ. ಕೆಟ ಗರಿಯಲ್ಲಿ ಗುರುತಿಸಿಕೊಂಡಿರುವ ಮೀರಾ ಬಾಯಿ ಚಾಹ್ನು, ವರ್ಲ್ಡ್ ಚಾಂಪಿಯನ್‌ ಶಿಪ್‌ ಮತ್ತು ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ತಲಾ 1 ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮಣಿಪುರದವರಾದ ಇವರು ಹಲವು ಬಾರಿ ಸ್ಪರ್ಧೆಯಲ್ಲಿ ಸೋತರೂ ಹಿಮ್ಮೆಟ್ಟಲಿಲ್ಲ. ಬದಲಾಗಿ ತಮ್ಮ ನಿರಂತರ ಪರಿಶ್ರಮದಿಂದಲೇ ಸಾಧಕ ಮಹಿಳೆಯರ ಸ್ಥಾನದಲ್ಲಿ ನಿಂತು ಕೊಂಡಿದ್ದಾರೆ. ವೈಟ್‌ ಲಿಫ್ಟಿಂಗ್ ನಲ್ಲಿ ಸಾಧನೆಗೈದ ಇನ್ನೊಬ್ಬ ಮಣಿಪುರದ ಮಹಿಳೆ ಕೆ. ಸಂಜಿತಾ ಚಾಹ್ನು. ಕಾಮ ನ್‌ ವೆಲ್ತ್‌ ಗೇಮ್ಸ್‌ ನಲ್ಲಿ 48 ಮತ್ತು 53 ಕೆ.ಜಿ. ವಿಭಾಗದಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಇವರು, ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ 84 ಕೆ.ಜಿ. ಭಾರ ಎತ್ತಿದ ದಾಖಲೆಯೂ ಇವರ ಹೆಸರಲ್ಲಿದೆ. ಸಣ್ಣ ಕೃಷಿ ಕನ ಮಗಳಾಗಿರುವ ಪೂನಂ ಯಾದವ್‌ ವೈಟ್‌ ಲಿಫ್ಟಿಂಗ್ ನಲ್ಲಿ ಬೆಳೆದು ಬಂದ ಹಾದಿ ಅತ್ಯಂತ ಕಠಿನವಾಗಿತ್ತು. ಮೂರು ವರ್ಷಗಳ ಕಠಿನ ತರಬೇತಿಯ ಅನಂತರ 2014ರಲ್ಲಿ ಕಾಮನ್‌ ವೆಲ್ತ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಾಗ ಪ್ರವಾಸ ನಿಧಿ ಹೊಂದಿಸಲು ಅವರ ತಂದೆ ಮನೆಯಲ್ಲಿದ್ದ ಎಮ್ಮೆಯನ್ನು ಮಾರಾಟ ಮಾಡಿದರು. ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ 2014ರಲ್ಲಿ 63 ಕೆ.ಜಿ. ವಿಭಾಗದಲ್ಲಿ ಕಂಚು, 2018ರಲ್ಲಿ 69 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಎಲ್ಲರ ಪ್ರೀತಿಯ ಮನೆ ಮಗಳಾದರು.

ಕುಸ್ತಿ, ಬಾಕ್ಸಿಂಗ್‌ ನಲ್ಲೂ ಮಿಂಚು
ಪುರುಷರು ಮಾತ್ರ ಆಡಬಲ್ಲ ಕ್ರೀಡೆ ಎಂದೇ ಕರೆಯಲ್ಪಡುತ್ತಿದ್ದ ಕುಸ್ತಿಯಲ್ಲಿ ದಂಗಲ್‌ ಸಿನೆಮಾ ಮಾಡಿದ ರಂಗು ಮರೆಮಾಚುವ ಮುನ್ನವೇ ದೇಶದ ಕುಸ್ತಿ ಪಟುವಾಗಿ ಗೀತಾ, ಬಬಿತಾ ಪೋಗಟ್‌ ಸಾಲಿನಲ್ಲಿ ವಿನೇಶ್‌ ಪೋಗಟ್‌ ಹೆಸರು ಕೇಳಿಬರುತ್ತಿದೆ. ಗೀತಾ, ಬಬಿತಾ ಪೋಗಟ್‌ ಅವರ ಚಿಕ್ಕಪ್ಪ ಮಗಳಾಗಿರುವ ವಿನೇಶ್‌ ಪೋಗಟ್‌ ಅವರು ಮಹಾ ವೀರ ಸಿಂಗ್‌ ಅವರಿಂದಲೇ ತರಬೇತಿ ಪಡೆಯುತ್ತಿದ್ದು, 2014, 2018ರಲ್ಲಿ ನಡೆದ ಕಾಮನ್‌ವೇಲ್ತ್‌ ಗೇಮ್ಸ್‌ ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಷ್ಯನ್‌ ಗೇಮ್ಸ್‌ ನಲ್ಲಿ ಕಂಚು, ಏಷ್ಯನ್‌ ಚಾಂಪಿಯನ್‌ ಶಿಪ್‌ನಲ್ಲಿ 3 ಬೆಳ್ಳಿ, 2 ಕಂಚು, ಕಾಮನ್‌ ವೆಲ್ತ್‌ ವ್ರೆ ಸ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದಿದ್ದಾರೆ. ಮದುವೆ, ಎರಡು ಮಕ್ಕಳ ತಾಯಿಯಾದ ಮೇಲೆ ಬಾಕ್ಸಿಂಗ್‌ ನಲ್ಲಿ ಮೇರಿ ಕೋಮ್‌ ಮಾಡಿದ ಸಾಧನೆ ಅವರನ್ನು ಮತ್ತಷ್ಟು ಎತ್ತರಕ್ಕೇರುವಂತೆ ಮಾಡಿದೆ.

ವಿದ್ಯಾ ಕೆ. ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next