Advertisement

ಸಾಧನೆ ಮಾಡಲು ಛಲ, ಏಕಾಗ್ರತೆ ಅಗತ್ಯ; ಬೊಮ್ಮಾಯಿ

05:29 PM May 30, 2022 | Team Udayavani |

ಆನೇಕಲ್‌: ಸಾಧನೆಯನ್ನು ಮಾಡಲು ಛಲ ಇದ್ದಾಗ ಮಾತ್ರ ಮನುಷ್ಯ ಬದಲಾವಣೆ ಆಗಲು ಸಾಧ್ಯ. ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಏಕಾಗ್ರತೆಯಿಂದ ಕೆಲಸ ಮಾಡಿದಾಗ ಮಾತ್ರ ಫ‌ಲ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಜಾಗತಿಕ ಯೋಗ ಕೇಂದ್ರವಾಗಿರುವ ಜಿಗಣಿಯ ಎಸ್‌. ವ್ಯಾಸ ವಿಶ್ವದ್ಯಾಲಯದಿಂದ ಸಮಗ್ರ ಆರೋಗ್ಯ ತಂತ್ರಜ್ಞಾನ ಕುರಿತ ನೂತನ “ಆಯು’ ಆ್ಯಪ್‌ ಸಿದ್ಧಪಡಿಸಲಾಗಿದ್ದು, ನೂತನ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿಗೆ ಮನುಷ್ಯನಲ್ಲಿ ಒತ್ತಡ ಹೆಚ್ಚಾಗಿ ನಗು ಎನ್ನುವುದು ಮಾಯವಾಗುತ್ತಿದೆ. ಚಿಂತೆಯಿಂದ ಮನುಷ್ಯ ತನ್ನನ್ನು ತಾನು ಒತ್ತಡಕ್ಕೆ ಸಿಲುಕಿಸಿಕೊಳ್ಳುತ್ತಿದ್ದು, ನಮ್ಮಲ್ಲಿ ಮಗುವಿನಂತಹ ಮುಗ್ಧತೆ ಹಾಗೂ ಕುತೂಹಲ ಇದ್ದಾಗ ಮಾತ್ರ ಹೆಚ್ಚು ಕಾಲ ಜೀವನ ಸಾಗಿಸಲು ಸಾಧ್ಯ ಎಂದರು.

ಸಾಧಕನಿಗೆ ಸಾವು ಅಂತ್ಯ ಅಲ್ಲ, ಸಾವಿನ ನಂತರ ಬದುಕುವವ ನಿಜವಾದ ಸಾಧಕ. ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಆರೋಗ್ಯವಂತ ಮನಸ್ಸಿನಲ್ಲಿ ಆರೋಗ್ಯವಂತ ದೇಹ ಇರುತ್ತದೆ. ಯೋಗ ದಿನದ ಪರಿಪೂರ್ಣತೆಯನ್ನು ಪಡೆದು ದೇವರಿಂದ ಪಡೆದ ದೇಹವನ್ನು ಉಳಿಸಿಕೊಳ್ಳಬೇಕು ಎಂದರು.

ಉತ್ತಮ ಬೆಳವಣಿಗೆ: ವಿಶೇಷವಾಗಿ ಹೃದಯ ತೊಂದರೆ, ಪಿಸಿಒಎಸ್‌ ಅಧಿಕ ರಕ್ತದೊತ್ತಡ, ಮೂಳೆ ಸಂಬಂಧಿ ಸಮಸ್ಯೆಗಳು, ಬೆನ್ನುನೋವು, ಆಸ್ತಮ, ಖನ್ನತೆ, ಯೋಗಕ್ಷೇಮ ಪರಿಹಾರ, ಸಮಗ್ರ ಯೋಗ ವಿಧಾನ, ಧ್ಯಾನ, ಪ್ರಾಣಾಯಾಮ, ವಿಶ್ರಾಂತಿ ಪಡೆಯುವ ವಿಧಾನಗಳನ್ನು ಕಲಿಸಿ ಕೊಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಚಿಕಿತ್ಸಾ ವಿಧಾನ ಅಡಕ: ಎಸ್‌.ವ್ಯಾಸ ವಿವಿ ಕುಲಪತಿ ಡಾ. ಎಚ್‌.ಆರ್‌. ನಾಗೇಂದ್ರ ಮಾತನಾಡಿ, ದಶಕಗಳ ಕಾಲ ನಡೆಸಿದ ಸಂಶೋಧನೆ ಫ‌ಲದಿಂದ ಆಯು ಆ್ಯಪ್‌ ಸಿದ್ಧಪಡಿಸಲಾಗಿದ್ದು, ಇದು ಯೋಗ ಜ್ಞಾನದ ಅಂಶಗಳನ್ನು ಒಳಗೊಂಡಿದೆ. ಚಿಕಿತ್ಸಾ ವಿಧಾನಗಳನ್ನು ಅಡಕಗೊಳಿಸಲಾಗಿದೆ. ಎಸ್‌-ವ್ಯಾಸ ಸಾಮರ್ಥ್ಯ ಮತ್ತು ರಿಸೆಟ್‌ ತಂತ್ರಜ್ಞಾನದ ಪರಿಣಿತರು ನೀಡುತ್ತಿರುವ ಯೋಗ ಕೇಂದ್ರಿತ ಪರಿಹಾರ ಕ್ರಾಂತಿಕಾರಕ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸಮಸ್ಯೆಗಳಿಗೆ ಪರಿಹಾರ: ರಿಸೆಟ್‌ ಟೆಕ್‌ ಸಂಸ್ಥೆಯ ಸಂಸ್ಥಾಪಕ ಕರನ್‌ ತಲ್ರೆಜ ಮಾತನಾಡಿ, ಲುಕೆ ಕೌಟಿನ್ಹೋ ಮತ್ತು ವಂಶಿ ಕೃಷ್ಣ ತಲಸಿಲ ನೇತೃತ್ವದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಬಹುತೇಕ ರೋಗಗಳು ಒತ್ತಡ ಮತ್ತು ಜೀವನ ಶೈಲಿಯಿಂದ ಬರುತ್ತವೆ. ಇದಕ್ಕಾಗಿ ಯೋಗ ಮತ್ತು ಧ್ಯಾನದ ವಿಧಾನ ಅನುಸರಿಸುವಂತೆ ಸೂಚಿಸಲಾಗಿದೆ. ಕಾಲ ಕ್ರಮೇಣ ತಾವಾಗಿಯೇ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮ ಶ್ಲಾಘನೀಯ: ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಇಡೀ ಪ್ರಪಂಚದಲ್ಲಿ ಎಸ್‌.ವ್ಯಾಸ ಯೋಗ ಕೇಂದ್ರಕ್ಕೆ ಇತಿಹಾಸ ಸೃಷ್ಟಿ ಮಾಡಲು ಪ್ರಮುಖ ಕಾರಣ ನರೇಂದ್ರ ಮೋದಿ. ಇಂದು ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ತನ್ನದೇ ಆದ ಶಕ್ತಿ ಸಾಮರ್ಥ್ಯ ಬರಬೇಕಾದರೆ ಮೋದಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳೇ ಸಾಕ್ಷಿ. ಎಸ್‌. ವ್ಯಾಸ ಯೋಗ ಕೇಂದ್ರ ಇಂದು ಯೋಗದ ಮೂಲಕ ಆರೋಗ್ಯ ಕಾಪಾ ಡುವ ನಿಟ್ಟಿ ನಲ್ಲಿ ಕಾರ್ಯಕ್ರಮ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.

ಧರ್ಮದ ಉಳಿಗಾಗಿ ಕ್ರಮ: ಗ್ಲೊಬಲ್‌ ಹಿಂದೂ ಹೆರಿಟೇಜ್‌ ಪ್ರಕಾಶ್‌ ರಾವ್‌ ಮಾತನಾಡಿ, ನಮ್ಮ ಧರ್ಮದ ಉಳಿಗಾಗಿ ನಾವು ಕಾರ್ಯಕ್ರಮ ರೂಪಿಸುತ್ತಿದ್ದು, ಅನ್ನದಾನ, ಗರ್‌ ವಾಪಸಿ ಕಾರ್ಯಕ್ರಮ, ಬಾಲ ಸಂಸ್ಕಾರ, ಗೋ ರಕ್ಷಣೆ ಸೇರಿದಂತೆ ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿ ಹಲವಾರು ರಾಜ್ಯಗಳಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ. ನಮ್ಮ ತಾಯಿಯ ರಕ್ಷಣೆ ಆಗದೇ ಹೋದರೆ, ಹಿಂದೂ ರಕ್ಷಣೆ ಅಸಾಧ್ಯ. ನಮ್ಮ ಸನಾತನ ಧರ್ಮ ಉಳಿಗಾಗಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ಗ್ಲೋಬಲ್‌ ಹಿಂದೂ ಹೆರಿಟೇಜ್‌ ಪ್ರತಿಷ್ಠಾನದ ಅಧ್ಯಕ್ಷ ಡಾ.ವಿ.ವಿ. ಪ್ರಕಾಶ್‌ ರಾವ್‌, ಪದ್ಮಶ್ರೀ ಪ್ರಶಸ್ತಿ ವಿಜೇತ ಯೋಗ ಗುರು ಎಚ್‌.ಆರ್‌.ನಾಗೇಂದ್ರ ಗುರೂಜಿ, ಪ್ರೊ. ಎನ್‌.ಕೆ. ಮಂಜುನಾಥ್‌, ಎಂ.ಕೆ.ಶ್ರೀಧರ್‌, ಡಾ. ಸುಬ್ರಮಣ್ಯ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌, ಐಜಿಪಿ ಚಂದ್ರಶೇಖರ್‌, ಬೆಂಗಳೂರು ಗ್ರಾಮಾಂತರ ಎಸ್‌ಪಿ ವಂಶಿಕೃಷ್ಣ, ಡಾ.ವಿ. ಪ್ರಕಾಶ್‌ ರಾವ್‌, ಕರಣ್‌ ತೈರೇಜಾ ಹಾಗೂ ಮತ್ತಿತರರು ಇದ್ದರು.

ವಿದ್ಯಾರ್ಥಿಗಳಿಗೆ ಯೋಗ ಬೋಧನೆ ಮಾಡಿದ ಸಿಎಂ
ಕಾರ್ಯಕ್ರಮದಲ್ಲಿ ಸಾವಿರಾರು ಜನ ಯೋಗ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಯೋಗ ಹಾಗೂ ಅದರಿಂದ ಆಗುವ ಅನುಕೂಲ. ಮನುಷ್ಯ ಹೇಗೆ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡುವ ಮೂಲಕ ವಿದ್ಯಾರ್ಥಿಗಳ ಗಮನಸೆಳೆದರು.

ಆ್ಯಪ್‌ನಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ
ಎಸ್‌. ವ್ಯಾಸ ವಿವಿ ಇತ್ತೀಚೆಗೆ ರೋಗಮುಕ್ತ ಭಾರತ ಪರಿಕಲ್ಪನೆಯಡಿ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ 90 ದಿನದ “ಸ್ವಸ್ಥ ಶಕ್ತಿ” ಕಾರ್ಯಕ್ರಮಕ್ಕೆ ಇತ್ತೀಚೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹೆಲೋತ್‌ ಚಾಲನೆ ನೀಡಿದ್ದರು. ಆಯು ಆ್ಯಪ್‌ನಲ್ಲಿ ಕೃತಕ ಬುದ್ಧಮತ್ತೆಯಂತಹ ಆಧುನಿಕ ತಂತ್ರಜ್ಞಾನ ಅಳವಡಿಸಿದ್ದು, ಎಸ್‌. ವ್ಯಾಸ ವಿವಿ ವೈದ್ಯರು 750ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಆಧಾರದ ಮೇಲೆ ನೂತನ ಆ್ಯಪ್‌ನ್ನು ಸಿದ್ಧಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next