Advertisement

ರೋಟರಿಯಿಂದ ಸಮಗ್ರ ಸಮಾಜದ ಹಿತ ಸಾಧನೆ: ಡಾ|ಹೆಗ್ಗಡೆ

03:10 PM Jan 07, 2018 | |

ಮೂಡಬಿದಿರೆ: “ಸಮಕಾಲೀನ ಜೀವನ ಮಟ್ಟ ಸುಧಾರಣೆಗಾಗಿ ಸಮರ್ಪಿತ ಮನಸ್ಸು, ಧೋರಣೆ ನಮ್ಮಲ್ಲಿದ್ದಾಗ ನಮ್ಮ ಬದುಕಿನ ಉತ್ಕರ್ಷೆಯೊಂದಿಗೆ ನಮ್ಮ ಜತೆ ಇರುವ ಮಂದಿಯ ಜೀವನದಲ್ಲಿ ಬೆಳಕನ್ನು ಮೂಡಿಸಲು ಸಾಧ್ಯ. ರೋಟರಿ ಕ್ಲಬ್‌ನಂಥ ಅಂತಾರಾಷ್ಟ್ರೀಯ ಸಂಘಟನೆಗಳು ಇಂಥ ಧೋರಣೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವು ದರಿಂದ ಸಮಗ್ರ ಸಮಾಜದ ಹಿತ ಸಾಧನೆಯಾಗುತ್ತಿದೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶನಿವಾರ ಸಂಜೆ ರೋಟರಿ ಪ.ಪೂ. ಕಾಲೇಜು ಆವರಣದಲ್ಲಿ ನಡೆದ ಮೂಡಬಿದಿರೆ ರೋಟರಿ ಕ್ಲಬ್‌ನ ಸುವರ್ಣ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸುಪ್ರೀಂ ಕೋರ್ಟ್‌ ನ್ಯಾ|ಮೂ| ಎಸ್‌. ಅಬ್ದುಲ್‌ ನಝೀರ್‌, ಹೈಕೋರ್ಟ್‌ನ ನ್ಯಾಯಾಧೀಶೆ ಜ| ಶ್ರೀಮತಿ ಬಿ.ವಿ. ನಾಗರತ್ನ, ರೋಟರಿ ಜಿಲ್ಲಾ ಗವರ್ನರ್‌ ಸುರೇಶ್‌ ಚೆಂಗಪ್ಪ, ಅ. ಗವರ್ನರ್‌ ಎ.ಎಂ. ಕುಮಾರ್‌, ಮಂಗಳೂರು ರೋಟರಿ ಅಧ್ಯಕ್ಷ ಎಚ್‌. ವಸಂತ್‌ ಶೆಣೈ, ಗೌ| ರೋಟರಿ ಸದಸ್ಯರಾದ ಶಾಸಕ ಕೆ. ಅಭಯಚಂದ್ರ, ಮಾಜಿ ಸಚಿವ, ರೋಟರಿ ಎಜುಕೇಶನ್‌ ಸೊಸೈಟಿ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಮತ್ತು ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹಾಗೂ ರಜತ ಸಂಭ್ರಮದ ಇನ್ನರ್‌ ವೀಲ್‌ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಕ್ಲಬ್‌ ಕಾರ್ಯದರ್ಶಿ ಮೊಹಮ್ಮದ್‌ ಆರಿಫ್‌ ಉಪಸ್ಥಿತರಿದ್ದರು.

ಸ್ಮರಣ ಸಂಚಿಕೆ ಬಿಡುಗಡೆ ರೋಟರಿ ಜಿಲ್ಲೆ 3181ರ ಗವರ್ನರ್‌ ಸುರೇಶ್‌ ಚೆಂಗಪ್ಪ ಅವರು “ಸುವರ್ಣ ಪಥ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಜ| ಅಬ್ದುಲ್‌ ನಝೀರ್‌ ಮಾತನಾಡಿ, “ಭಿನ್ನ ವಾಗಿ ಚಿಂತಿಸುವ, ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯದೊಂದಿಗೆ ಸಾಧನೆ ಮಾಡುವವರು ಯಾವ ಎತ್ತರ ವನ್ನೂ ಏರಲು ಸಾಧ್ಯ. ಮಕ್ಕಳ ಮನಸ್ಸಿನಲ್ಲಿ ವಿಷಯ ತುಂಬಿಸುವ ಬದಲು ಅವರ ಮನಸ್ಸಿಗೆ ತರಬೇತಿ ಕೊಡುವ ಕೆಲಸ ನಡೆಯಬೇಕಾಗಿದೆ’ ಎಂದರು.

ಹೈಕೋರ್ಟ್‌ನ ನ್ಯಾಯಾಧೀಶೆ ಜ| ಶ್ರೀಮತಿ ಬಿ.ವಿ. ನಾಗರತ್ನ ಮಾತನಾಡಿ, ಶಿಕ್ಷಣ, ಆರೋಗ್ಯ, ಪರಿಸರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಕ್ಲಬ್‌ನ್ನು ಆಭಿನಂದಿಸಿದರು.

Advertisement

“ಎಂಡೋ ಪೀಡಿತ ಮಕ್ಕಳ ಆರೋಗ್ಯ, ಶಿಕ್ಷಣದಂಥ ವಿಷಯದಲ್ಲಿ ಕರಾವಳಿಯ ರೋಟರಿ ಮತ್ತಿತರ ಸಂಘಟನೆಗಳು ಕಾಳಜಿ ವಹಿಸಲು ಮುಂದಾಗಬೇಕು’ ಎಂದು ಅವರು ವಿಶೇಷವಾಗಿ ಕರೆ ನೀಡಿದರು.

ಶಾಸಕ ಅಭಯಚಂದ್ರ ಅವರು ಮಾತನಾಡಿ ರೋಟರಿ ಈ ಊರಿಗೆ ಶ್ರೇಷ್ಠ ನಾಯಕತ್ವ ಒದಗಿಸುತ್ತ ಬಂದಿದೆ; ಕೆರೆಗಳ ಕಾಯಕಲ್ಪ, ಶೌಚಾಲಯ, ಬ್ಲಿಡ್‌ಬ್ಯಾಂಕ್‌ ಮುಂತಾದ ಕೊಡುಗೆಗಳಿಂದ ಜನಮನ ಸ್ಪಂದಿಸಿದೆ’ ಎಂದು ಶ್ಲಾಘಿಸಿದರು.

ಅಭಿವಂದನೆ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಸಂಭ್ರಮ ದಲ್ಲಿ ರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಹಾಗೂ ಮೂಲತಃ ಮೂಡಬಿದಿರೆಯವರೇ ಆದ ಜ| ಎಸ್‌. ಅಬ್ದುಲ್‌ ನಝೀರ್‌ ಅವರನ್ನು ಸಮ್ಮಾನಿಸ ಲಾಯಿತು. ರೋಟರಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪಿ. ಎಂ. ಹೆಗ್ಗಡೆ ಅವರಿಗೆ ಮತ್ತು ಉಪಾಧ್ಯಕ್ಷ ಅನಂತಕೃಷ್ಣ ರಾವ್‌ ಜ| ಅಬ್ದುಲ್‌ ನಝೀರ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.

ಸಮ್ಮಾನ ಸ್ಥಾಪಕ ಸದಸ್ಯರಾಗಿ 50 ವರ್ಷಗಳಲ್ಲೂ ಸಕ್ರಿಯರಾಗಿರುವ ಡಾ| ಎಲ್‌.ಸಿ. ಸೋನ್ಸ್‌, ಡಾ| ಬಿ. ರತ್ನಾಕರ ಶೆಟ್ಟಿ ಮತ್ತು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರನ್ನು ಹಾಗೂ ಪೂರ್ವಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಸಮ್ಮಾನಿಸಲಾಯಿತು. ಅಗಲಿದ ಪೂರ್ವಾಧ್ಯಕ್ಷರನ್ನು ಸ್ಮರಿಸಲಾಯಿತು. ಕ್ಲಬ್‌ ಅಧ್ಯಕ್ಷ ಶ್ರೀಕಾಂತ್‌ ಕಾಮತ್‌ ಸ್ವಾಗತಿಸಿ, ಕಾರ್ಯದರ್ಶಿ ಮೊಹಮ್ಮದ್‌ ಆರಿಫ್ ವಂದಿಸಿದರು. 2014ರಿಂದ ಪ್ರಾರಂಭಿಸಲಾಗಿರುವ ಬಡವರಿಗೆ ಉಚಿತ ಶೌಚಾಲಯದ ಕೊಡುಗೆ ನೀಡುವ ರೋಟಾಲೆಟ್ಸ್‌ ಯೋಜನೆ ಕುರಿತು ರೋಟರಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ| ಮುರಳೀಕೃಷ್ಣ ವಿವರ ನೀಡಿದರು. ಡಾ| ಪುಂಡಿಕಾ ಗಣಪಯ್ಯ ಭಟ್‌ ಕ್ಲಬ್ಬಿನ 50 ವರ್ಷಗಳ ಚಟುವಟಿಕೆಗಳ ಸಿಂಹಾವಲೋಕನಗೈದರು. ಡಾ| ಮಮತಾ ಗುರುಪ್ರಸಾದ್‌ ಅಡಿಗ ಮತ್ತು ಎಂ. ಗಣೇಶ್‌ ಕಾಮತ್‌ ನಿರೂಪಿಸಿದರು. ರೋಟರಿ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸುವರ್ಣ ಸಂಭ್ರಮದ ಕೊಡುಗೆಗಳು ಮೂಡಬಿದಿರೆ ಆಳ್ವಾಸ್‌ ಹೆಲ್ತ್‌ ಸೆಂಟರ್‌ ಸಹ ಯೋಗದಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಸಜ್ಜುಗೊಂಡಿರುವ ಆಳ್ವಾಸ್‌ ರೋಟರಿ ಬ್ಲಿಡ್‌ ಬ್ಯಾಂಕ್‌ ಉದ್ಘಾಟಿಸಿದ ಡಾ| ಹೆಗ್ಗಡೆ ಅವರು ರೋಟಾಲೇಕ್‌ ಯೋಜನೆಯಡಿ 12 ಲಕ್ಷ ರೂ.ವೆಚ್ಚದಲ್ಲಿ ಕಾಯಕಲ್ಪ ನೀಡಿರುವ ಮೊಹಲ್ಲಾ ತೀರ್ಥ ಕೆರೆ ಲೋಕಾರ್ಪಣೆಗೊಳಿಸಿ, ರೋಟಾಲೆಟ್‌ ಯೋಜನೆಯ 98, 99 ಮತ್ತು 100ನೇ ಫಲಾನುಭವಿಗಳಿಗೆ ಹಸ್ತಾಂತರಗೈದು ರೋಟರಿ ಪ.ಪೂ. ಕಾಲೇಜಿಗೆ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಶ್‌ ರೂಂ ಬ್ಲಾಕ್‌ ಸಮರ್ಪಣೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next